ಬೈಂದೂರು: ಎಸ್‌ಡಿಎಂಸಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ಬೈಂದೂರು, ಫೆ.4: ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ, ಕುಂದಾಪುರ/ ಬೈಂದೂರು ತಾಲೂಕು ಘಟಕ ಮಗು ಮತ್ತು ಕಾನೂನು ಕೇಂದ್ರ ನ್ಯಾಷನಲ್ ಲಾ ಕಾಲೇಜ್ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಬೈಂದೂರು ವಲಯ, ಪಟ್ಟಣ ಪಂಚಾಯತ್ ಬೈಂದೂರು, ಜಮೀಯತುಲ್ ಫಲಾಹ್ ಬೈಂದೂರು ತಾಲೂಕು ಘಟಕ, ನಮ್ಮ ನಾಡು ಒಕ್ಕೂಟ ಬೈಂದೂರು ಇವರ ಸಹಭಾಗಿತ್ವದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಗಳ ಎಸ್ಡಿಎಂಸಿ ಸದಸ್ಯರಿಗೆ ತರಬೇತಿ ಕಾರ್ಯಾಗಾರವನ್ನು ಬೈಂದೂರಿನ ಅಂಬೇಡ್ಕರ್ ಸಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಅವನೀಶ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಪೂಜಾರಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಉಡುಪಿ ಜಿಲ್ಲಾ ಎಸ್ಡಿಎಂಸಿ ಸಮನ್ವಯ ವೇದಿಕೆ ಸರಕಾರಿ ಶಾಲೆಗಳ ಕುರಿತಂತೆ ಅಪಾರ ಕಾಳಜಿಯೊಂದಿಗೆ ಉತ್ತಮವಾಗಿದೆ ಕೆಲಸ ನಿರ್ವಹಿಸುತಿದೆ ಎಂದು ಶ್ಲಾಘಿಸಿ ಶುಭ ಹಾರೈಸಿದರು.
ಉಡುಪಿ ಜಿಪಂ ಸದಸ್ಯ ಸುರೇಶ್ ಬಟವಾಡಿ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ಮುಂದಿನಮನಿ, ನಮ್ಮ ನಾಡು ಒಕ್ಕೂಟದ ಅಧ್ಯಕ್ಷ ಅಬ್ದುಲ್ ಸಮಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್, ಜಮೀಯತುಲ್ ಫಲಾಹ್ ಬೈಂದೂರು ತಾಲೂಕು ಘಟಕದ ಉಪಾಧ್ಯಕ್ಷ ಎಚ್.ಎಸ್. ಸಿದ್ದಿಕ್ ಶಿರೂರು, ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಲಕ್ಷ್ಮಣ ಯೆಡ್ತರೆ, ಎಸ್ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಉಷಾ ರಮೇಶ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಸ್ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಾಪುರ /ಬೈಂದೂರು ತಾಲೂಕು ಘಟಕದ ಕಾರ್ಯದರ್ಶಿ ಜ್ಯೋತಿ ಶೆಟ್ಟಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಹರಿಶ್ಚಂದ್ರ ಆಚಾರ್ ವಂದಿಸಿದರು. ಸಮನ್ವಯ ವೇದಿಕೆ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ. ನಾಗರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದ ಕೊನೆಗೆ ಬೈಂದೂರು ಪಟ್ಟಣ ಪಂಚಾಯತ್ ನೂತನ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷ ರಾಗಿ ಜ್ಯೋತಿ ಶೆಟ್ಟಿ, ಅಧ್ಯಕ್ಷ ವೆಂಕಟರಮಣ ಎಚ್, ಉಪಾಧ್ಯಕ್ಷ ಕಾವೇರಿ, ಕಾರ್ಯದರ್ಶಿ ಸುಜಾತಾ ಪಡುವರಿ, ಸಹ ಕಾರ್ಯದರ್ಶಿ ಸೋನಿಯಾ, ಕೋಶಾಧಿಕಾರಿ ಮಣಿಯಮ್ಮ, ಸಂಘಟನಾ ಕಾರ್ಯದರ್ಶಿ ಲಲಿತ ನಾಗರತ್ನ, ಸೂಲಿಯಣ್ಣ ಗಾಣಿಗ ಇವರನ್ನು ಸರ್ವಾನುಮತ ದಿಂದ ಆಯ್ಕೆ ಮಾಡಲಾಯಿತು.







