ತಪೋವನಿ ಮಾತಾಜಿ ನಿಧನ

ಉಡುಪಿ, ಫೆ.4: ಮೂಲತಃ ಉಡುಪಿಯ ಪಂದುಬೆಟ್ಟಿನವರಾಗಿದ್ದು, ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ರಿಂದ ಮಂತ್ರೋಪದೇಶ ಪಡೆದು ಅಧ್ಯಾತ್ಮದ ಪಥದಲ್ಲಿ ಉನ್ನತ ಸಾಧನೆಗೈದಿದ್ದ ತಪೋವನಿ ಮಾತಾಜಿ ಯಾನೆ ಸುಭದ್ರಾ ಮಾತಾಜಿ ಗುರುವಾರ ಹರಿದ್ವಾರದ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಸುಮಾರು 89 ವರ್ಷ ವಯಸ್ಸಾಗಿತ್ತು.
ಸುಭದ್ರಾ ಮಾತಾಜಿ ಅವರ ಮೂಲ ಹೆಸರು ವಾರಿಜಾಕ್ಷಿ. ಬಾಲ್ಯದಲ್ಲೇ ಅಧ್ಯಾತ್ಮದ ಸೆಳೆತಕೊಕ್ಕೊಳಗಾಗಿ ಉಡುಪಿಯ ಮಠ ಮತ್ತು ದೇವಾಲಯ ಪರಿಸರದಲ್ಲೇ ಭಜನೆ, ಪ್ರವಚನ, ಸತ್ಸಂಗ ಮೊದಲಾದವುಗಳಲ್ಲಿ ಭಾಗಿಯಾ ಗುತಿದ್ದ ಸುಭದ್ರಾ, ಮುಂದೆ ಪೇಜಾವರ ಶ್ರೀಗಳಲ್ಲಿ ಮಂತ್ರೋಪದೇಶ ಪಡೆದು ಅಧ್ಯಾತ್ಮ ಸಾಧನೆಗಾಗಿ 50-60 ವರ್ಷಗಳ ಹಿಂದೆ ಕಷ್ಟಪಟ್ಟು ಉತ್ತರದ ಹಿಮಾಲಯ ಸೇರಿದ್ದರು. ಹಿಮಾಲಯದ ಗಂಗೋತ್ರಿಗಿಂತಲೂ ಎತ್ತರ ಪ್ರದೇಶದಲ್ಲಿ ಅವರು ನಿರಂತರ ಒಂಭತ್ತು ವರ್ಷಗಳ ಕಾಲ ಕಠಿಣ ತಪಸ್ಸಾರಿಸಿದ್ದರು ಎಂದು ಹೇಳಲಾಗುತ್ತಿದೆ.
ಈ ಸಾಧನೆಯಿಂದ ಹಿಮಾಲಯ ಪ್ರದೇಶದಲ್ಲಿ ತಪೋವನೀ ಮಾ ಎಂದೇ ಪ್ರಸಿದ್ಧರಾಗಿದ್ದರು. ಬಳಿಕ ಹಿಮಾಲಯದಲ್ಲೇ ಆಶ್ರಮವೊಂದನ್ನು ತೆರೆದು ಸಾಧುಗಳಿಗೆ, ಯಾತ್ರಿಗಳಿಗೆ ಊಟೋಪಚಾರ, ಆರೋಗ್ಯ ಸೇವೆಗಳನ್ನು ನೀಡುತಿದ್ದರು. ಅವರ ಆಧ್ಯಾತ್ಮ ಸಾಧನೆಯ ಕುರಿತು ಹಿಂದಿ ಯಲ್ಲಿ ಪುಸ್ತಕ ವೊಂದು ಪ್ರಕಟವಾಗಿದ್ದು, ಅದನ್ನು ಪ್ರೊ.ಭಾಸ್ಕರ ಮಯ್ಯ ಕನ್ನಡಕ್ಕೆ ಅನುವಾದ ಮಾಡಿದ್ದರು. ಅದನ್ನು ಇತ್ತೀಚೆಗೆ ಮಾತಾಜಿ ಚಿಕಿತ್ಸೆ ಪಡೆಯುತಿದ್ದ ಹರಿದ್ವಾರದ ಆಸ್ಪತ್ರೆಯಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದ್ದರು.
ತಫೋವನೀ ಮಾ ನಿಧನಕ್ಕೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ, ಪ್ರೊ.ಭಾಸ್ಕರ ಮಯ್ಯ, ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಕುಂದರ್, ವಾಸುದೇವ ಭಟ್ ಪೆರಂಪಳ್ಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.







