ರಾಜ್ಯ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಆಯ್ಕೆ
ಅತೀ ಹೆಚ್ಚು ಮತಗಳನ್ನು ಪಡೆದರೂ ಗೆಲ್ಲದ ಮುಹಮ್ಮದ್ ನಲಪಾಡ್

ಬೆಂಗಳೂರು, ಫೆ.4: ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಮಾಜಿ ಸಚಿವ ಎಂ.ಆರ್. ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎರಡನೇ ಅತೀ ಹೆಚ್ಚಿನ ಮತ ಗಳಿಸಿದ ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 7 ಜನರು ನಾಮಪತ್ರ ಸಲ್ಲಿಸಿದ್ದರು. ಮಿಥುನ್ ರೈ ಕಣದಿಂದ ಹಿಂದೆ ಸರಿದಿದ್ದರಿಂದ ಆರು ಜನರು ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದರು. ಇವರಲ್ಲಿ ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್, ಎಚ್.ಎಸ್. ಮಂಜುನಾಥ್ ಹಾಗೂ ರಕ್ಷಾ ರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಎಂ.ಎಸ್.ರಕ್ಷಾ ರಾಮಯ್ಯ ಅವರು 57271 ಮತಗಳನ್ನು ಪಡೆದರೆ, ಮುಹಮ್ಮದ್ ನಲಪಾಡ್ ಅವರು 64203 ಮತಗಳನ್ನು ಪಡೆದಿದ್ದರು. ನಲಪಾಡ್ ಅವರು ರಾಮಯ್ಯ ಅವರಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದರೂ ನಲಪಾಡ್ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ. ಹೀಗಾಗಿ ರಕ್ಷಾ ರಾಮಯ್ಯ ಅವರು ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.







