ಪೊಲೀಸರು ಬಂಧಿಸಿದ್ದರಿಂದ ತಿಹಾರ್ ಜೈಲಿನಲ್ಲಿಯೇ ವರದಿ ಮಾಡುವ ಅವಕಾಶ ಸಿಕ್ಕಿತು: ಪತ್ರಕರ್ತ ಮನ್ ದೀಪ್ ಪೂನಿಯಾ
"ನನ್ನ ಕಾಲುಗಳ ಮೇಲೆ ನೋಟ್ ಗಳನ್ನು ಬರೆದುಕೊಳ್ಳುತ್ತಿದ್ದೆ"

ಹೊಸದಿಲ್ಲಿ: ಕಳೆದ ವಾರ ಸಿಂಘು ಗಡಿಯಲ್ಲಿ ರೈತ ಪ್ರತಿಭಟನೆಗಳ ಕುರಿತು ವರದಿ ಮಾಡಲು ತೆರಳಿದ್ದ ವೇಳೆ ದಿಲ್ಲಿ ಪೊಲೀಸರಿಂದ ಬಂಧಿತರಾಗಿದ್ದ ಹಾಗೂ ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಪತ್ರಕರ್ತ ಮನ್‍ದೀಪ್ ಪುನಿಯಾ "ಪೊಲೀಸರು ನನ್ನನ್ನು ಬಂಧಿಸಿದ್ದರಿಂದ ತಿಹಾರ್ ಜೈಲಿನಿಂದಲೇ ವರದಿ ಮಾಡುವ ಅವಕಾಶ ಲಭಿಸಿತು. ಜೈಲಿನಲ್ಲಿರುವಾಗ ಕೆಲವೊಂದು ಮಾಹಿತಿಗಳನ್ನು ತಮ್ಮ ಕಾಲುಗಳಲ್ಲಿಯೇ ಬರೆದಿದ್ದೇನೆ" ಎಂದು ಹೇಳಿಕೆ ನೀಡಿದ್ದಾರೆ.
ತಮ್ಮ ಜತೆ ಜೈಲಿನಲ್ಲಿದ್ದ ರೈತರ ಜತೆ ತಾವು ಮಾತನಾಡಿದ್ದಾಗಿ ಹೇಳಿದ ಅವರು ತಾವು ರೈತರ ಹೇಳಿಕೆಗಳ ಕುರಿತಂತೆ ತಮ್ಮ ಕಾಲುಗಳಲ್ಲಿಯೇ ಬರೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಈ ಕುರಿತು ವಿಸ್ತೃತ ವರದಿಯನ್ನು ಸದ್ಯದಲ್ಲಿಯೇ ಬರೆಯುವುದಾಗಿಯೂ ಅವರು ಹೇಳಿದ್ದಾರೆ.
"ತಳಮಟ್ಟದಿಂದ ವರದಿ ಮಾಡುವುದು ನನ್ನ ಕೆಲಸ. ಜೈಲಿನಲ್ಲಿದ್ದಾಗ ಅಲ್ಲಿ ಬಂಧಿತರಾಗಿದ್ದ ರೈತರ ಜತೆ ಮಾತನಾಡುವ ಅವಕಾಶ ದೊರೆಯಿತು. ಹೇಗೆ ಮತ್ತು ಯಾವಾಗ ಅವರನ್ನು ಬಂಧಿಸಲಾಯಿತು ಎಂದು ಕೇಳಿದ್ದೇನೆ" ಎಂದು ಪುನಿಯಾ ಹೇಳಿದ್ದಾರೆ.
"ನನ್ನ ಸಂದರ್ಶನವನ್ನು ಯಾರಾದರೂ ಮಾಡುತ್ತಾರೆಂದು ನಾನು ಯಾವತ್ತೂ ಊಹಿಸಿರಲಿಲ್ಲ. ನಾನು ಭಾರತದಲ್ಲಿ ಸ್ಲೋ ಜರ್ನಲಿಸಂ ಮಾಡುತ್ತಿದ್ದೇನೆ. ಗ್ರಾಮೀಣ ಭಾಗದಿಂದ ತಳ ಮಟ್ಟದ ವರದಿಗಳನ್ನು ಮಾಡುವುದು ನನ್ನ ಕೆಲಸ" ಎಂದು ಅವರು ಟಿವಿ ವಾಹಿನಿಯೊಂದರ ಜತೆ ಮಾತನಾಡುತ್ತಾ ಹೇಳಿದರು.
"ನನಗೆ ಜಾಮೀನು ನೀಡಲಾಗಿದೆ ಇದಕ್ಕಾಗಿ ಮಾನ್ಯ ನ್ಯಾಯಾಲಯಕ್ಕೆ ನಾನು ಅಭಾರಿ. ಆದರೆ ಪ್ರಥಮವಾಗಿ ನನ್ನನ್ನು ಬಂಧಿಸಲೇಬಾರದಾಗಿತ್ತು" ಎಂದು ತಮ್ಮ ಬಿಡುಗಡೆ ನಂತರ ಪುನಿಯಾ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ.
#MandeepPunia Mandeep Punia speaks after being released from Tihar jail pic.twitter.com/NLoPN68FWi
— Siddharth Setia (@ethicalsid) February 3, 2021







