ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಅನ್ನದಾನಕ್ಕೆ ದೇಣಿಗೆ ನೀಡಿದ ವೃದ್ದೆ!

ಕುಂದಾಪುರ, ಫೆ.4: ಕಳೆದ 30 ವರ್ಷಗಳಿಂದ ಸಾಲಿಗ್ರಾಮದ ಆಂಜೆನೇಯ ಸ್ವಾಮಿ ಗುಡಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಗಂಗೊಳ್ಳಿಯ ಅಶ್ವತ್ಥಮ್ಮ ಎಂಬವರು ದೇವಸ್ಥಾನದಲ್ಲಿ ನಡೆಯುವ ಅನ್ನದಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಮದುವೆಯಾಗಿ ಎಳೆವೆಯಲ್ಲಿಯೆ ಪತಿ ಮತ್ತು ಮಕ್ಕಳನ್ನು ಕಳೆದುಕೊಂಡ ಅಶ್ವತ್ಥಮ್ಮ, ಅತಂತ್ರರಾಗಿ ಆಂಜೆನೇಯ ಸ್ವಾಮಿ ಗುಡಿಯಲ್ಲಿ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದರು. ಭಕ್ತರು ನೀಡಿದ ಹಣವನ್ನು ಊಟಕ್ಕೆ ಕೊಟ್ಟು ಉಳಿದ ಹಣವನ್ನು ಪಿಗ್ಮಿಗೆ ಹಾಕಿ ಉಳಿತಾಯ ಮಾಡುತ್ತಿದ್ದರು. ಹೀಗೆ ಪಿಗ್ಮಿಯಲ್ಲಿ ಒಂದು ಲಕ್ಷ ರೂ. ಸಂಗ್ರಹ ಆದಾಗ ಅದನ್ನು ಯಾವುದಾದರು ಪುಣ್ಯ ಕ್ಷೇತ್ರಕ್ಕೆ ಹೋಗಿ ಅನ್ನದಾನಕ್ಕೆ ನೀಡಿ ಬರುತ್ತಿದ್ದರು.
ಪ್ರತಿ ವರ್ಷ ಅಯ್ಯಪ್ಪಸ್ವಾಮಿ ಸನ್ನಿದಾನಕ್ಕೆ ತೆರಳುವ ಇವರು ಈವರೆಗೆ ದೇಶದ ಹಲವು ದೇವಸ್ಥಾನವನ್ನು ಸಂದರ್ಶಿಸಿದ್ದಾರೆ. ಈ ಬಾರಿಯೂ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಮಾಲೆ ಧರಿಸಿರುವ ಇವರು, ಫೆ.9ರಂದು ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಇರುಮುಡಿ ಕಟ್ಟಿ ಅದೇ ದಿನ ಸಾರ್ವಜನಿಕರಿಗೆ ಅನ್ನದಾನ ನೀಡಲು ದೇವಸ್ಥಾನದ ಆಡಳಿತ ಮಂಡಳಿಗೆ ಒಂದು ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. ಈ ಮೂಲಕ ಇವರು ಸ್ಥಳೀಯವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.





