ನ್ಯಾಯಾಂಗ ಬಂಧನದಿಂದ ಪರಾರಿ ಪ್ರಕರಣ: ಆರೋಪಿಗೆ ಶಿಕ್ಷೆ

ಉಡುಪಿ : ನ್ಯಾಯಾಂಗ ಬಂಧನಕ್ಕಾಗಿ ಜೈಲಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರನ್ನು ದೂಡಿ ಹಾಕಿ ಜೀಪಿನಿಂದ ಪರಾರಿ ಯಾಗಿದ್ದ ಪ್ರಕರಣದ ಆರೋಪಿಗೆ ಉಡುಪಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಫೆ.2ರಂದು ಆದೇಶ ನೀಡಿದೆ.
ಬಾದಾಮಿ ತಾಲೂಕಿನ ಹನುಮಂತ ಬಸಪ್ಪ ಕಂಬಳಿ (41) ಶಿಕ್ಷೆಗೆ ಗುರಿ ಯಾಗಿರುವ ಆರೋಪಿಯಾಗಿದ್ದು, ಈತ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಸಗ್ರಿ ನಡೆದ 17 ವರ್ಷ ಪ್ರಾಯದ ಬಾದಾಮಿ ಮೂಲದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.
ಬಾಲಕಿಯನ್ನು ಮಾ.9ರಂದು ಅಪಹರಿಸಿ, ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ್ದ ಹನುಮಂತನನ್ನು ಮಾ.30ರಂದು ಮಣಿಪಾಲ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿಯನ್ನು ಪೊಲೀಸರು ಮಾ.31ರಂದು ಹಿರಿಯಡ್ಕ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ, ಆತ ಪೊಲೀಸರನ್ನು ದೂಡಿ ಜೀಪಿನಿಂದ ಹಾರಿ ಪರಾರಿಯಾಗಿದ್ದನು. ಬಳಿಕ ಹುಡು ಕಾಟ ನಡೆಸಿದ ಪೊಲೀಸರು ಆತನನ್ನು ಮತ್ತೆ ಎ.1ರಂದು ಬಂಧಿಸಿದ್ದರು.
ಹೀಗೆ ನ್ಯಾಯಾಂಗ ಬಂಧನದಿಂದ ತಪ್ಪಿಸಿಕೊಂಡ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಈ ಪ್ರಕರಣವು ಉಡುಪಿಯ ಪ್ರಧಾನ ಸಿ.ಜೆ ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ.
ಪ್ರಕರಣದಲ್ಲಿ ಸಾಕ್ಷ್ಯ, ಪೂರಕ ಸಾಕ್ಷ್ಯ ಹಾಗೂ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಇರ್ಫಾನ್, ಆರೋಪಿ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ಆತನಿಗೆ 2 ವರ್ಷಗಳ ಕಾಲ ಶಿಕ್ಷೆ ವಿಧಿಸಿ ಆದೇಶ ನೀಡಿ ದರು. ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಬದರೀನಾಥ್ ನಾರಿ ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದಾರೆ. ಆರೋಪಿ ವಿರುದ್ಧದ ಅತ್ಯಾಚಾರ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯ ದಲ್ಲಿ ನಡೆಯುತ್ತಿದೆ.







