ಕೃಷಿ ಕಾಯ್ದೆಗೆ ಅಮೆರಿಕದ ಬೆಂಬಲವೆಂಬ ಕೆಲವು ಮಾಧ್ಯಮಗಳ ವರದಿ ಸತ್ಯಕ್ಕೆ ದೂರ
ದಿ ಸ್ಕ್ರೋಲ್ ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಫೆ.5: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಅಮೆರಿಕವು ಬೆಂಬಲಿಸಿ ಹೇಳಿಕೆ ನೀಡಿದೆಯೆಂಬ ಹಲವಾರು ಇಂಗ್ಲೀಷ್ ಹಾಗೂ ಹಿಂದಿ ಸುದ್ದಿವಾಹಿನಿಗಳ ಹಾಗೂ ಜಾಲತಾಣಗಳು ವರದಿಗಳನ್ನು ಪ್ರಕಟಿಸಿರುವುದು ವಿವಾದಕ್ಕೆ ಗ್ರಾಸವಾಗಿದೆ. ಭಾರತೀಯ ಮಾರುಕಟ್ಟೆಗಳ ದಕ್ಷತೆಯ ಸುಧಾರಣೆಗೆ ಹಾಗೂ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವುದಕ್ಕಾಗಿ ಕೈಗೊಳ್ಳುವ ಕ್ರಮಗಳನ್ನು ತಾನು ಸ್ವಾಗತಿಸುವುದಾಗಿ ಹೇಳುವ ಮೂಲಕ ಅಮೆರಿಕವು ಭಾರತದ ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸಿರುವುದಾಗಿ ತಿಳಿಸಿತ್ತು.
ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ನೀಡಿದ್ದ ಈ ಹೇಳಿಕೆಯ ಯಥಾರ್ಥತೆಯನ್ನು ಮನಗಾಣದೆ ಕೆಲವು ಸುದ್ದಿವಾಹಿನಿಗಳು ಹಾಗೂ ಸುದ್ದಿಜಾಲತಾಣಗಳು ಅಮೆರಿಕವು ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದೆಯೆಂದು ಹೇಳಿರುವುದಾಗಿ ವರದಿ ಮಾಡಿವೆಯೆಂದು ಸ್ಕ್ರೋಲ್ ಸುದ್ದಿಜಾಲತಾಣ ಬೆಟ್ಟು ಮಾಡಿದೆ.
ರೈತರ ಪ್ರತಿಭಟನೆಯ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ವಾಸ್ತವಿಕವಾಗಿ ಹೀಗೆ ಹೇಳಿದ್ದರು ‘‘ಸಾಮಾನ್ಯವಾಗಿ ಅಮೆರಿಕವು ಭಾರತೀಯ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಹಾಗೂ ಖಾಸಗಿ ವಲಯದಿಂದ ವಿಶಾಲವಾದ ಹೂಡಿಕೆಯನ್ನು ಆಕರ್ಷಿಸಲು ಕೈಗೊಳ್ಳುವ ಕ್ರಮಗಳನ್ನು ಸ್ವಾಗತಿಸುತ್ತದೆ. ಏನೇ ಇದ್ದರೂ ಯಾವುದೇ ಭಿನ್ನಾಭಿಪ್ರಾಯಗಳನ್ನು ಪಕ್ಷಗಳ ನಡುವಿನ ಮಾತುಕತೆಯ ಮೂಲಕ ಬಗೆಹರಿಸುವುದನ್ನು ಅದು ಉತ್ತೇಜಿಸುತ್ತದೆ’’ ಎಂದು ಅವರು ಹೇಳಿದ್ದಾಗಿ ದಿ ಸ್ಕ್ರೋಲ್ ವರದಿಯಲ್ಲಿ ತಿಳಿಸಿದೆ.
ಈ ಮೂಲಕ ಕೃಷಿ ಕಾಯ್ದೆಗಳಿಗೆ ಅಮೆರಿಕವು ಬೆಂಬಲ ನೀಡಿದೆಯೆಂಬುದನ್ನುಈ ಹೇಳಿಕೆಯು ಸ್ಪಷ್ಟವಾಗಿ ಹೇಳಿಲ್ಲವೆಂದು ವರದಿ ಹೇಳಿದೆ. ಆದರೂ ಕೆಲವು ಸುದ್ದಿ ಜಾಲತಾಣಗಳು ನೈಜ ಅಂಶವನ್ನು ಮರೆಮಾಚಿ ಅಮೆರಿಕವು ಭಾರತ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸಿವೆ ಎಂಬ ತಲೆಬರಹದಲ್ಲಿ ಸುದ್ದಿಯನ್ನು ಪ್ರಕಟಿಸಿರುವುದಾಗಿ ದಿ ಸ್ಕ್ರೋಲ್ ವರದಿ ತಿಳಿಸಿದೆ
ರಿಪಬ್ಲಿಕ್ ಟಿವಿಯು, ‘‘ ರೈತರ ಪ್ರತಿಭಟನೆಯ ನಡುವೆ ಅಮೆರಿಕವು ಭಾರತವನ್ನು ಬೆಂಬಲಿಸಿದೆ ಹಾಗೂ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಪ್ರಶಂಸಿಸಿದೆ. ಭಾರತದ ಕೃಷಿ ವಲಯವನ್ನು ಸುಧಾರಣೆಗೊಳಿಸುವ ಭಾರತ ಸರಕಾರದ ನಡೆಯನ್ನು ನೂತನ ಬಿಡೆನ್ ಆಡಳಿತಗಳ ಬೆಂಬಲವನ್ನು ಸೂಚಿಸುವ ಹೇಳಿಕೆಯನ್ನು ಅಮೆರಿಕದ ವಿದೇಶಾಂಗ ಇಲಾಖೆ ಬಿಡುಗಡೆಗೊಳಿಸಿದೆ ಎಂಬುದಾಗಿ ವರದಿ ಮಾಡಿದೆ.
ಬ್ಯುಸಿನೆಸ್ ಟಿವಿ, ದಿ ವೀಕ್, ಮಿಂಟ್, ಟೈಮ್ಸ್ ನೌ, ಇಕನಾಮಿಕ್ ಟೈಮ್ಸ್ ಸೇರಿದಂತೆ ವಿವಿಧ ಸುದ್ದಿಜಾಲತಾಣಗಳು, ಕೇಂದ್ರದ ಕೃಷಿ ಕಾಯ್ದೆಯನ್ನು ಅಮೆರಿಕವು ಬೆಂಬಲಿಸಿರುವುದಾಗಿ ಸಾರುವ ಶೀರ್ಷಿಕೆಯ ಸುದ್ದಿಗಳನ್ನು ಪ್ರಕಟಿಸಿವೆ.







