ರೈತರು ದೇಶದ ಅಭಿವೃದ್ಧಿಯ ಮತ್ತು ಪ್ರಗತಿಯ ಚಾಲನಾ ಶಕ್ತಿ: ಪ್ರಧಾನಿ ಮೋದಿ
ಚೌರಿ ಚೌರಾ ಶತಮಾನೋತ್ಸವ ಕಾರ್ಯಕ್ರಮ

ಹೊಸದಿಲ್ಲಿ, ಫೆ.4: ರೈತರು ದೇಶದ ಬೆನ್ನೆಲುಬಾಗಿದ್ದಾರೆ ಮತ್ತು ದೇಶದ ಸ್ವಾತಂತ್ರ ಸಂಗ್ರಾಮದ ಭಾಗವಾದ ಚೌರಿ ಚೌರಾ ಘಟನೆಯಲ್ಲೂ ರೈತರು ಪ್ರಮುಖ ಪಾತ್ರ ವಹಿಸಿದ್ದಾರೆ. ರೈತರು ದೇಶದ ಅಭಿವೃದ್ಧಿ, ಪ್ರಗತಿಯ ಚಾಲನಾ ಶಕ್ತಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ಚೌರಿ ಚೌರಾದಲ್ಲಿ ನಡೆದ ಘಟನೆಯ ಶತಮಾನೋತ್ಸವ ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಚೌರಿ ಚೌರಾ ಘಟನೆಯ ಬಗ್ಗೆ ಸೂಕ್ತ ಚರ್ಚೆಯಾಗಿಲ್ಲ ಮತ್ತು ಘಟನೆಯಲ್ಲಿ ಹುತಾತ್ಮರಾದವರ ಬಗ್ಗೆ ಇತಿಹಾಸದ ಪುಟಗಳಲ್ಲಿ ನಿರ್ಲಕ್ಷ ವಹಿಸಿರುವುದು ವಿಷಾದನೀಯ. ಈ ಹುತಾತ್ಮರ ರಕ್ತ ನಮ್ಮ ದೇಶದ ಮಣ್ಣಿನಲ್ಲಿದೆ ಮತ್ತು ನಮಗೆ ಪ್ರೇರಣಾ ಶಕ್ತಿಯಾಗಿರುತ್ತದೆ . ಚೌರಿ ಚೌರಾದ ಘಟನೆ ಕೇವಲ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಘಟನೆಯ ಸಂದೇಶ ದೊಡ್ಡದಿದೆ. ಹಲವು ಕಾರಣಗಳಿಂದಾಗಿ ಇದನ್ನು ಸಣ್ಣ ಘಟನೆ ಎಂದು ಪರಿಗಣಿಸಲಾಗಿದ್ದರೂ ನಾವು ಇದನ್ನು ಸಂದರ್ಭದ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. ಬೆಂಕಿ ಠಾಣೆಯಲ್ಲಿ ಮಾತ್ರವಲ್ಲ, ಜನರ ಹೃದಯದಲ್ಲೂ ಇತ್ತು ಎಂದರು.
ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿದ ಪ್ರಧಾನಿ, ದೇಶದ ಪ್ರಗತಿಯ ಹಿಂದೆ ರೈತರಿದ್ದಾರೆ. ಚೌರಿ ಚೌರಾ ಸಂಗ್ರಾಮದಲ್ಲೂ ಅವರು ಮಹತ್ತರ ಪಾತ್ರ ವಹಿಸಿದ್ದರು. ದೇಶದ ಸ್ವಾತಂತ್ರ ಹೋರಾಟದಲ್ಲೂ ರೈತರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ರೈತರ ಹಿತಾಸಕ್ತಿಯ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರೈತರನ್ನು ಸ್ವಾವಲಂಬಿಗಳನ್ನಾಗಿಸಲು ಕಳೆದ 6 ವರ್ಷಗಳಿಂದ ಕೈಗೊಂಡಿರುವ ಕ್ರಮಗಳಿಂದಾಗಿ ಕೊರೋನ ಸೋಂಕಿನ ಸಂದರ್ಭದಲ್ಲೂ ಕೃಷಿ ಕ್ಷೇತ್ರ ಅಭಿವೃದ್ಧಿಗೊಂಡಿದೆ. ಮಂಡಿ( ಮಾರುಕಟ್ಟೆ)ಗಳನ್ನು ರೈತರಿಗೆ ಲಾಭದಾಯವನ್ನಾಗಿಸಲು 1000 ಹೆಚ್ಚುವರಿ ಮಂಡಿಗಳನ್ನು ಇ-ನಾಮ್‌ಗೆ ಜೋಡಿಸಲಾಗುವುದು ಎಂದು ಪ್ರಧಾನಿ ಹೇಳಿದರು.
ದೇಶದ ಏಕತೆ ನಮ್ಮ ಆದ್ಯತೆಯಾಗಿರಬೇಕು ಮತ್ತು ದೇಶದ ಗೌರವ ಎಲ್ಲಕ್ಕಿಂತ ಮಿಗಿಲಾದುದು. ಈ ಸಂಕಲ್ಪದೊಂದಿಗೆ ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ಜೊತೆಯಾಗಿಸಿಕೊಂಡು ಮುನ್ನಡೆಯಬೇಕು ಎಂದವರು ಹೇಳಿದರು.
1922ರಲ್ಲಿ ಉತ್ತರಪ್ರದೇಶದಲ್ಲಿ ಸ್ವಾತಂತ್ರ ಹೋರಾಟಗಾರರ ತಂಡವೊಂದು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಗೋಲೀಬಾರ್ ನಡೆಸಿದ್ದರು. ಇದರಿಂದ ಉದ್ರಿಕ್ತ ಗುಂಪು ಚೌರಿಚೌರಾದ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದಾಗ ಠಾಣೆಯಲ್ಲಿದ್ದ 23 ಪೊಲೀಸ್ ಸಿಬಂದಿ ಹಾಗೂ ಅಧಿಕಾರಿಗಳು ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ 228 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು ವಿಚಾರಣೆಯ ಸಂದರ್ಭ 6 ಮಂದಿ ಮೃತಪಟ್ಟಿದ್ದರು. 172 ಮಂದಿಗೆ ಮರಣದಂಡನೆ, ಉಳಿದವರಿಗೆ ದೀರ್ಘಾವಧಿಯ ಶಿಕ್ಷೆ ವಿಧಿಸಲಾಗಿತ್ತು. ಚೌರಿಚಾರಾ ಹಿಂಸಾಚಾರದಿಂದ ನೊಂದ ಮಹಾತ್ಮಾ ಗಾಂಧೀಜಿ ಅಸಹಾಕಾರ ಚಳವಳಿಗೆ ಕರೆ ನೀಡಿದ್ದು ಇದು ಭಾರತದ ಸ್ವಾತಂತ್ರ ಸಂಗ್ರಾಮದ ಒಂದು ಪ್ರಮುಖ ಹೆಗ್ಗುರುತಾಗಿ ದಾಖಲಾಗಿದೆ.







