ದಲಿತ ಯುವತಿಯ ಅತ್ಯಾಚಾರ ಪ್ರಕರಣ: ಸಿ.ಟಿ.ರವಿ, ಶೋಭಾ ಜೊತೆಗಿರುವ ಆರೋಪಿಯ ಫೋಟೋಗಳು ವೈರಲ್

ಚಿಕ್ಕಮಗಳೂರು, ಫೆ.4: ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಆವುತಿ ಗ್ರಾಮದಲ್ಲಿ ಭೂ ಮಾಲಕನೋರ್ವ ದಲಿತ ಸಮುದಾಯದ ಯುವತಿಯನ್ನು ಮನೆ ಕೆಲಸಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದ್ದು, ಪರಿಣಾಮ ಯುವತಿ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು 15 ದಿನ ಕಳೆದರೂ ಆರೋಪಿಯ ಬಂಧನವಾಗಿಲ್ಲ. ಈ ನಡುವೆ, ಪ್ರಕರಣದ ಆರೋಪಿ ಎಚ್.ಟಿ.ಮಲ್ಲೇಶ್ ಗೌಡ ಬಿಜೆಪಿ ಪಕ್ಷದ ಮುಖಂಡನಾಗಿದ್ದು, ಸಿ.ಟಿ.ರವಿ, ಶೋಭಾ ಕರಂದ್ಲಾಜೆಯಂತಹ ನಾಯಕರೊಂದಿಗೆ ಹತ್ತಿರದ ನಂಟು ಹೊಂದಿರುವ ಕಾರಣಕ್ಕೆ ಪೊಲೀಸರು ಆತನನ್ನು ಬಂಧಿಸುವ ಧೈರ್ಯ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ತಾಲೂಕಿನ ಆವುತಿ ಗ್ರಾಮದ ದಲಿತ ಕುಟುಂಬದ ಯುವತಿಯನ್ನು ಮಲ್ಲೇಶ್‍ಗೌಡ ತನ್ನ ಮನೆಯ ಕೆಲಸಕ್ಕೆಂದು ಆಕೆಯ ಪೋಷಕರ ಮನವೊಲಿಸಿ ಕರೆದೊಯ್ದಿದ್ದ. ತನ್ನ ಮನೆಯಲ್ಲಿದ್ದ ವೇಳೆ ಮಲ್ಲೇಶ್‍ಗೌಡ ಯುವತಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಇದರಿಂದ ಆಕೆ ಗರ್ಭಿಣಿಯಾಗಿದ್ದು, ಕಳೆದ ಜ.16ರಂದು ಯುವತಿ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ. ಬಳಿಕ ಯುವತಿ ಹಾಗೂ ಆಕೆಯ ಪೋಷಕರು ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಮಲ್ಲೇಶ್‍ಗೌಡ ವಿರುದ್ಧ ದೂರು ದಾಖಲಿಸಿದ್ದರು.
ಆದರೆ ಪೊಲೀಸರು ಮಲ್ಲೇಶ್‍ಗೌಡ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರಾದರೂ ಇದುವರೆಗೂ ಆತನನನ್ನು ಬಂಧಿಸಿಲ್ಲ. ಈ ಸಂಬಂಧ ಪೊಲೀಸರನ್ನು ವಿಚಾರಿಸಿದರೆ ಆರೋಪಿ ತಲೆಮರೆಸಿಕೊಂಡಿದ್ದಾನೆಂದು ಸಬೂಬು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ.
ಮಲ್ಲೇಶ್‍ಗೌಡ ಭೂ ಮಾಲಕನಾಗಿದ್ದು, ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನೂ ಆಗಿದ್ದಾನೆ. ಅಲ್ಲದೇ ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಸಂಸದೆ ಶೋಭಾ ಕರಂದ್ಲಾಜೆ ಅವರ ಆಪ್ತನೂ ಆಗಿದ್ದಾನೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮಲ್ಲೇಶ್‍ಗೌಡ ಈ ನಾಯಕರೊಂದಿಗೆ ಇರುವ, ದತ್ತಮಾಲೆ ಹಾಕಿರುವ, ಬಿಜೆಪಿ ಪಕ್ಷದ ಸದಸ್ಯನಾಗಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ನಾಯಕರ ಪ್ರಭಾವದಿಂದಾಗಿ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗುತ್ತಿಲ್ಲ ಎಂದು ದಲಿತ ಪರ ಸಂಘಟನೆಗಳು ಆರೋಪಿಸಿವೆ.
ಆರೋಪಿ ಮಲ್ಲೇಶ್‍ಗೌಡ ಆವುತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷನೂ ಆಗಿದ್ದು, ಆತನ ಒಡೆತನದಲ್ಲಿ ರಾಕ್‍ವೀವ್ ಎಂಬ ಹೋಮ್‍ಸ್ಟೇ ಕೂಡ ಆವುತಿ ಗ್ರಾಮದಲ್ಲಿದೆ.
.jpg)
.jpg)
.jpg)







