ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ತೆರಿಗೆ ಹೆಚ್ಚಳ ಪ್ರಸ್ತಾವನೆ ವಿಧೇಯಕಗಳಿಗೆ ಒಪ್ಪಿಗೆ

ಬೆಂಗಳೂರು, ಫೆ.4: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾರ್ಗಸೂಚಿ ದರದ ಅನ್ವಯ ತೆರಿಗೆಯನ್ನು ಹೆಚ್ಚಳ ಮಾಡುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ನಗರ ಪಾಲಿಕೆಗಳ(ತಿದ್ದುಪಡಿ) ವಿಧೇಯಕ 2021ಕ್ಕೆ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.
ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ವಿಧೇಯಕವನ್ನು ಮಂಡಿಸಿ, ವಾಣಿಜ್ಯ ಕಟ್ಟಡಗಳಿಗೆ ತೆರಿಗೆಗೆ ಗುರಿಯಾಗುವಂತಹ ಕಟ್ಟಡದ ಮೂಲ ಬೆಲೆಯ ಶೇ.0.5ಕ್ಕಿಂತ ಕಡಿಮೆಯಿಲ್ಲದ ಶೇ.3ಕ್ಕಿಂತ ಹೆಚ್ಚಿಲ್ಲದ ತೆರಿಗೆ ವಿಧಿಸುವುದು. ವಾಸದ ಕಟ್ಟಡ ಮತ್ತು ವಾಣಿಜ್ಯೇತರ ಕಟ್ಟಡಗಳಿಗೆ ಸಂಬಂಧಿಸಿದಂತೆ ತೆರಿಗೆಗೆ ಗುರಿಯಾಗುವಂತಹ ಕಟ್ಟಡದ ಮೂಲ ಬೆಲೆಯ ಶೇ.0.3ಕ್ಕಿಂತ ಹೆಚ್ಚಿಲ್ಲದ ಮತ್ತು ಶೇ.1ಕ್ಕಿಂತ ಹೆಚ್ಚಿಲ್ಲದಂತ ತೆರಿಗೆ ವಿಧಿಸುವುದು ಎಂದರು.
ಒಂದು ಸಾವಿರ ಚದರ ಮೀಟರಿಗಿಂತ ಹೆಚ್ಚಿಲ್ಲದ ಅಳತೆಯ ಖಾಲಿ ಭೂಮಿಯಿದ್ದಲ್ಲಿ ತೆರಿಗೆಗೆ ಗುರಿಯಾಗತಕ್ಕ ಭೂಮಿಯ ಮೂಲ ಬೆಲೆಯ ಶೇ.0.1ಕ್ಕಿಂತ ಕಡಿಮೆಯಿಲ್ಲದ ಶೇ.0.5ಕ್ಕಿಂತ ಹೆಚ್ಚಿಲ್ಲದಂತೆ ತೆರಿಗೆ ನಿಗದಿಪಡಿಸುವುದು. ನಾಲ್ಕು ಸಾವಿರ ಚದರ ಮೀಟರಿಗಿಂತ ಹೆಚ್ಚಿನ ಅಳತೆಯ ಖಾಲಿ ಭೂಮಿಯ ಸಂಬಂಧದಲ್ಲಿ ಶೇ.0.01ಕ್ಕಿಂತ ಹೆಚ್ಚಿಲ್ಲದಂತೆ ಶೇಕಡವಾರು ಮುನ್ಸಿಪಲ್ ಕೌನ್ಸಿಲ್ ಸ್ವತ್ತು ನಿಗದಿಪಡಿಸಬೇಕು ಎಂದು ಅವರು ಹೇಳಿದರು.
ಆದರೆ, ನಿಗದಿಪಡಿಸುವ ಶೇಕಡವಾರು ಪ್ರಮಾಣವು ಬೇರೆ ಬೇರೆ ಪ್ರದೇಶಗಳಲ್ಲಿ ಮತ್ತು ಕಟ್ಟಡಗಳ ಹಾಗೂ ಭೂಮಿಗಳ ಬೇರೆ ಬೇರೆ ವರ್ಗಗಳಿಗೆ ಬೇರೆ ಬೇರೆಯಾಗಿರಬಹುದು. ಆದರೆ, ಒಂದು ಕಟ್ಟಡಕ್ಕೆ ಹೊಂದಿಕೊಂಡಿರುವ ಭೂಮಿಗೆ, ಸ್ವತ್ತು ತೆರಿಗೆಯ ವಿಧಿಸುವಿಕೆಯಿಂದ ವಿನಾಯಿತಿಯನ್ನು ನೀಡಬೇಕು ಎಂದು ಅವರು ಹೇಳಿದರು.
ಪೌರಾಡಳಿತ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಎಂ.ಟಿ.ಬಿ.ನಾಗರಾಜ್ ಮಂಡಿಸಿದ ‘2021ನೆ ಸಾಲಿನ ಕರ್ನಾಟಕ ಪೌರಸಭೆಗಳ(ಎರಡನೆ ತಿದ್ದುಪಡಿ) ವಿಧೇಯಕ’ಕ್ಕೆ ಸಂಬಂಧಿಸಿದಂತೆ ಕೆಲಕಾಲ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗದೆ ಸಚಿವ ನಾಗರಾಜ್ ಮುಜುಗರ ಅನುಭವಿಸಿದ ಪ್ರಸಂಗ ನಡೆಯಿತು.
ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಯಾರಾದರೂ ಹಿರಿಯ ಸಚಿವರು ನೂತನ ಸಚಿವರ ನೆರವಿಗೆ ಧಾವಿಸುವಂತೆ ಹೇಳಿದರು. ಸಚಿವ ಜೆ.ಸಿ.ಮಾಧುಸ್ವಾಮಿ ಕೈ ಸನ್ನೆ ಮೂಲಕ ನನ್ನಿಂದ ಸಾಧ್ಯವಿಲ್ಲ ಎಂದರು. ಆಗ ಮಧ್ಯಪ್ರವೇಶಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ನಾಗರಾಜ್ ಪರವಾಗಿ ಸದನಕ್ಕೆ ಉತ್ತರ ನೀಡಿದರು.
ಅಸ್ವಿತ್ವದಲ್ಲಿರುವ ಸ್ವತ್ತು ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಲು ಹಾಗೂ ಸರಳೀಕೃತ ಸ್ವತ್ತು ತೆರಿಗೆ ಮೂಲಾಧಾರವನ್ನು ಉಪಬಂಧಿಸಲು, 2020-21ನೇ ವರ್ಷಕ್ಕಾಗಿ ನಿವ್ವಳ ರಾಜ್ಯ ದೇಶೀಯ ಉತ್ಪನ್ನದ(ಜಿಎಸ್‍ಡಿಪಿ) ಶೇ.0.25 ಹೆಚ್ಚುವರಿ ಸಾಲಪಡೆಯುವ ಮಿತಿಗೆ ಅರ್ಹರಾಗುವಂತೆ ರಾಜ್ಯ ಸರಕಾರವನ್ನು ಸಶಕ್ತಗೊಳಿಸಲು ಈ ತಿದ್ದುಪಡಿ ಮಾಡಲಾಗುತ್ತಿದೆ ಎಂದು ನಾಗರಾಜ್ ಹೇಳಿದರು.
ಈ ವೇಳೆ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಮಾತನಾಡಿ, ಈ ವಿಧೇಯಕಕ್ಕೆ ಮುನ್ನ ಸುಗ್ರೀವಾಜ್ಞೆ ಹೊರಡಿಸುವ ಅಗತ್ಯವೇನಿತ್ತು? ಇದಕ್ಕೂ ಮುನ್ನ ಮಂಡಿಸಿದ ವಿಧೇಯಕದಲ್ಲಿ ತೆರಿಗೆ ಪಾವತಿಗೆ ವಿನಾಯಿತಿ ನೀಡುತ್ತಿದ್ದೀರಾ. ಈಗ ಇನ್ನೊಂದು ವಿಧೇಯಕದಲ್ಲಿ ತೆರಿಗೆಯನ್ನು ಪರಿಷ್ಕರಣೆ ಮಾಡುವುದಾಗಿ ಹೇಳುತ್ತಿದ್ದೀರಾ? ಒಂದು ಕೈಯಿಂದ ಕೊಡೋದು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವುದು ಆಗುತ್ತದೆ ಎಂದರು.
ಈ ವೇಳೆ ಸ್ಪಷ್ಟನೆ ನೀಡಿದ ಜಗದೀಶ್ ಶೆಟ್ಟರ್, ಹಿಂದಿನ ವಿಧೇಯಕದಲ್ಲಿ ನಾವು ಹೊಸದಾಗಿ ವಿನಾಯಿತಿ ನೀಡುತ್ತಿಲ್ಲ. ಈಗಾಗಲೆ ಜಾರಿಯಲ್ಲಿರುವ ವಿನಾಯಿತಿ ನೀಡುವ ಅವಧಿಯನ್ನು ಒಂದು ತಿಂಗಳುಗಳ ಕಾಲ ವಿಸ್ತರಿಸಲು ಈ ವಿಧೇಯಕ ಜಾರಿಗೆ ತರುತ್ತಿದ್ದೇವೆ. ಕೇಂದ್ರ ಸರಕಾರದ ನಿರ್ದೇಶನದಂತೆ ಶೇ.0.25ರಷ್ಟು ಹೆಚ್ಚುವರಿ ಸಾಲ ಪಡೆಯಲು ಈ ವಿಧೇಯಕ ಜಾರಿಗೆ ತರುತ್ತಿದ್ದೇವೆ ಎಂದರು.
ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಸದಸ್ಯರಾದ ಸೌಮ್ಯಾ ರೆಡ್ಡಿ, ಆನಂದ್ ನ್ಯಾಮಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಅಜಯ್ ಸಿಂಗ್, ಎಚ್.ಪಿ.ಮಂಜುನಾಥ್, ರಾಜೇಗೌಡ ಸೇರಿದಂತೆ ಇನ್ನಿತರರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ತೆರಿಗೆ ಅಗತ್ಯ
ಪಟ್ಟಣ ಪಂಚಾಯತ್ ಗಳು, ಪುರಸಭೆಗಳಾಗಬೇಕು. ಪುರಸಭೆಗಳು ನಗರಸಭೆಗಳಾಗಿ ಮೇಲ್ದರ್ಜೆಗೇರಬೇಕು ಎಂದು ಜನರ ಒತ್ತಡ ಇರುತ್ತದೆ. ಈ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ. ಆದುದರಿಂದ, ತೆರಿಗೆ ಪ್ರಮಾಣವನ್ನು ಹೆಚ್ಚಿಸುವುದರಿಂದ ನಮಗೆ ಸಾಲ ಸೌಲಭ್ಯವು ಸಿಗುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆ ಆಗುತ್ತಲೆ ಇರುತ್ತದೆ.
-ಎಂ.ಟಿ.ಬಿ.ನಾಗರಾಜ್, ಪೌರಾಡಳಿ ಹಾಗೂ ಕಬ್ಬು ಸಚಿವ







