ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತರಿಗೆ ಪರಿಹಾರ ವಿಳಂಬವಾಗದಿರಲಿ: ಡಿಸಿ ಡಾ. ರಾಜೇಂದ್ರ

ಮಂಗಳೂರು, ಫೆ.4: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ಆಗುವ ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರದ ಹಣವನ್ನು ವಿಳಂಬವಿಲ್ಲದೇ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯ್ದೆ 1989) ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ಸಫಾಯಿ ಕರ್ಮಚಾರಿಗಳ ನಿಷೇಧ ಮತ್ತು ಪುನರ್ವಸತಿಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಜನವರಿಯಿಂದ ಈ ವೆರೆಗೆ 51 ದೌರ್ಜನ್ಯ ಪ್ರಕರಣಗಳಾಗಿದ್ದು, 33 ಪ್ರಕರಣಗಳಲ್ಲಿ 27.53 ಲಕ್ಷದಷ್ಟು ಪರಿಹಾರದ ಹಣವನ್ನು ನೀಡಲಾಗಿದೆ. ಬಾಕಿ ಉಳಿದ 14 ಪ್ರಕರಣಗಳನ್ನು ಶೀಘ್ರವಾಗಿ ಪರಿಹಾರವನ್ನು ನೀಡುವುದರ ಜೊತೆಗೆ ತನಿಖೆಗಳನ್ನು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪನ ಪತ್ರಗಳನ್ನು ಸಲ್ಲಿಸಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಡಿಸಿ ಮನ್ನಾ ಜಮೀನುಗಳ ಬಗ್ಗೆ ನಿಖರವಾದ ಮಾಹಿತಿಗಳನ್ನು ಕ್ರೋಡೀಕರಿಸಬೇಕು. ಅವುಗಳಲ್ಲಿ ಲಭ್ಯವಿರುವುದು, ಅತಿಕ್ರಮಣ ವಾಗಿರುವುದು ಮಾಡಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಉಳ್ಳವರು ಇದ್ದಲ್ಲಿ ಅವರನ್ನು ತೆರವುಗೊಳಿಸಬೇಕು. ಲಭ್ಯವಿರುವ ಜಮೀನಿನಲ್ಲಿ ನಿವೇಶನಗಳಾಗಿ ಪರಿವರ್ತಿಸಿ ಶೋಷಿತರು ಹಾಗೂ ನೊಂದವರಿಗೆ ಆದ್ಯತೆ ಮೇಲೆ ನಿವೇಶನ ನೀಡಬೇಕೆಂದು ತಿಳಿಸಿದರು.
ಜಾತಿ ಪ್ರಮಾಣಪತ್ರವನ್ನು ಕೆಲವು ಪ್ರಕರಣಗಳಲ್ಲಿ ನೀಡುತ್ತಿಲ್ಲ ಎಂಬ ಬಗ್ಗೆ ಕೇಳಿಬರುತ್ತಿದೆ. ನಿಖರವಾದ ದಾಖಲೆಗಳು ಇಲ್ಲದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ, ಮಹಜರು ಹಾಗೂ ಅವರ ಆಚಾರ-ವಿಚಾರಗಳು ಮತ್ತು ಸಂಪ್ರದಾಯಗಳ ಬಗ್ಗೆ ಪರಿಶೀಲಿಸಿ ಅರ್ಹರಿದ್ದಲ್ಲಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಸೂಚನೆ ನೀಡಿದರು.
ಡಿಸಿ ಮನ್ನಾ ಜಾಗದಲ್ಲಿ ಅಕ್ರಮ ಅತಿಕ್ರಮಣ ಮಾಡಿ ಯಾವುದೇ ಕಟ್ಟಡ ನಿರ್ಮಾಣ ಮಾಡಲು ಮುಂದಾದಲ್ಲಿ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಪ್ರಾಧಿಕಾರದವರು ಲೈಸೆನ್ಸ್ ನೀಡಬಾರದು. ಅದನ್ನು ಉಲ್ಲಂಘಿಸಿ ನಿರ್ಮಾಣ ಮಾಡಿದ್ದಲ್ಲಿ ಅಂತಹ ಕಟ್ಟಡಕ್ಕೆ ವಿದ್ಯುಚ್ಛಕ್ತಿ ಸೌಲಭ್ಯ, ನೀರಿನ ಸೌಲಭ್ಯ ಹಾಗೂ ಟ್ರೇಡ್ ಲೈಸೆನ್ಸ್‌ನ್ನು ನೀಡಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶೋಷಣೆ ಮಾಡಿದವರಿಗೆ ಕಾನೂನಿನ ಅಡಿಯಲ್ಲಿ ಆಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಯುವ ಜನರು ಮಾದಕ ವಸ್ತುಗಳ ವ್ಯಸನಿಗಳಾಗುವುದನ್ನು ತಪ್ಪಿಸಲು ಸಹ ಜಾಗೃತಿ ಮೂಡಿಸಬೇಕು ಎಂದರು.
ಪೂರ್ವಜರಿಗೆ ಸರಕಾರದಿಂದ ಸುಮಾರು ವರ್ಷಗಳ ಹಿಂದೆ ಮಂಜೂರಾಗಿ ಅವರ ಮರಣ ನಂತರ ಅವರ ಖಾತೆಯಲ್ಲಿ ಜಮೀನುಗಳಿದ್ದು, ಅವರ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆಗಳನ್ನು ಅಗತ್ಯ ದಾಖಲೆಗಳನ್ನು ಪಡೆದು ಮಾಡಿಕೊಡಬೇಕೆಂದು ತಿಳಿಸಿದರು.
ಪೌರ ಕಾರ್ಮಿಕರು ತಮ್ಮ ಕಾರ್ಯಗಳನ್ನು ಕೈಗೊಳ್ಳುವಾಗ ಸುರಕ್ಷತಾ ಸಾಧನಗಳನ್ನು ತಪ್ಪದೇ ಬಳಸಬೇಕು. ಮ್ಯಾನುವಲ್ ಸ್ಕಾವೆಂಜರ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಅವುಗಳ ಸ್ವಚ್ಛತಾ ಕಾರ್ಯಗಳನ್ನು ಯಂತ್ರಗಳ ಬಳಕೆಯಿಂದ ಮಾತ್ರ ಮಾಡಬೇಕು. ಉಲ್ಲಂಘಿಸುವುದು ಕಂಡುಬಂದಲ್ಲಿ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಡಿಸಿಪಿ ಹರಿರಾಮ್ ಶಂಕರ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅನುಷ್ಠಾನಾಧಿ ಕಾರಿಗಳು ಉಪಸ್ಥಿತರಿದ್ದರು.







