'ತಾಲೂಕು ಪಂಚಾಯತ್ ರದ್ದು' ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಚಿವ ಈಶ್ವರಪ್ಪ

ಬೆಂಗಳೂರು, ಫೆ. 4: ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಸೇರಿ ಮೂರು ಹಂತದ ವ್ಯವಸ್ಥೆ ಬದಲಿಗೆ ತಾಲೂಕು ಪಂಚಾಯತ್ ರದ್ದುಗೊಳಿಸಿ ಜಿಲ್ಲಾ ಹಾಗೂ ಗ್ರಾಮ ಪಂಚಾಯತ್ ವ್ಯವಸ್ಥೆ ಇರಬೇಕು ಎಂಬ ಅಭಿಪ್ರಾಯವಿದ್ದು, ಈ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಕುಮಾರ್ ಬಂಗಾರಪ್ಪ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ತಾಲೂಕು ಪಂಚಾಯತ್ ರದ್ದುಪಡಿಸಲು ನಮ್ಮಿಂದ ಸಾಧ್ಯವಿಲ್ಲ. ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಆದುದರಿಂದ ಈ ಸಂಬಂಧ ಸಂಪುಟದಲ್ಲಿ ಚರ್ಚಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಅನುದಾನದ ಕೊರತೆ ಹಿನ್ನಲೆಯಲ್ಲಿ ತಾಲೂಕು ಪಂಚಾಯತ್ ಹಲವು ಮಂದಿ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ, ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಸ್ಪರ್ಧಿಸಿದ್ದಾರೆ. ಸೂಕ್ತ ಪ್ರಮಾಣದಲ್ಲಿ ಅನುದಾನ ಲಭ್ಯವಿಲ್ಲ ಎಂಬ ಮಾತುಗಳಿವೆ ಎಂದು ಅವರು ಸ್ಪಷ್ಟನೆ ನೀಡಿದರು.
ಆರಂಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಕುಮಾರ್ ಬಂಗಾರಪ್ಪ ಮತ್ತು ಜೆಡಿಎಸ್ ಸದಸ್ಯ ನಾಡಗೌಡ, ಈ ಹಿಂದೆ ಎರಡು ಹಂತ ವ್ಯವಸ್ಥೆ ಸರಿಯಾಗಿತ್ತು. ಇದೀಗ ತಾಲೂಕು ಪಂಚಾಯತ್ ಸದಸ್ಯರಿಗೆ ಕೆಲಸವೂ ಇಲ್ಲ. ಅನುದಾನವೂ ಇಲ್ಲದ ದುಸ್ಥಿತಿ ಬಂದಿದೆ. ಹೀಗಾಗಿ ಎರಡು ಹಂತದ ವ್ಯವಸ್ಥೆ ಇದ್ದರೆ ಆಡಳಿತದ ದೃಷ್ಟಿಯಿಂದ ಒಳ್ಳೆಯದು ಎಂದರು.







