ಡಬ್ಲ್ಯುಎಚ್‌ಒ ವೆಬ್‌ಸೈಟ್‌ನಲ್ಲಿ ಭಾರತದ ನಕಾಶೆಯ ತಪ್ಪು ಚಿತ್ರಣವನ್ನು ಬಲವಾಗಿ ಆಕ್ಷೇಪಿಸಲಾಗಿದೆ:ಕೇಂದ್ರ

ಹೊಸದಿಲ್ಲಿ,ಫೆ.4: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ವೆಬ್‌ಸೈಟ್‌ನಲ್ಲಿ ಭಾರತದ ನಕಾಶೆಯನ್ನು ತಪ್ಪಾಗಿ ಚಿತ್ರಿಸಿರುವುದನ್ನು ಬಲವಾಗಿ ಆಕ್ಷೇಪಿಸಲಾಗಿದೆ ಮತ್ತು ಡಬ್ಲುಎಚ್‌ಒ ತನ್ನ ಪೋರ್ಟ್‌ಲ್‌ನಲ್ಲಿ ಡಿಸ್‌ಕ್ಲೇಮರ್ ಅಥವಾ ಹಕ್ಕು ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಿದೆ ಎಂದು ಕೇಂದ್ರವು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ವೆಬ್‌ಸೈಟ್‌ನಲ್ಲಿರುವ ನಕಾಶೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳನ್ನು ಸಂಪೂರ್ಣ ವಿಭಿನ್ನ ಬಣ್ಣದಿಂದ ತೋರಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರಳೀಧರನ್ ಅವರು ಈ ಮಾಹಿತಿಯನ್ನು ನೀಡಿದರು.
ಡಬ್ಲುಎಚ್‌ಒದ ಉನ್ನತ ಮಟ್ಟದಲ್ಲಿ ಈ ವಿಷಯವನ್ನು ಕೈಗೆತ್ತಿಕೊಂಡಿದ್ದ ಸರಕಾರವು ತನ್ನ ಗಡಿಗಳ ಸರಿಯಾದ ಚಿತ್ರಣ ಕುರಿತು ಭಾರತದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ ಎಂದ ಮುರಳೀಧರನ್,ಪ್ರಕಟಿಸಲಾದ ವಿಷಯವು ಯಾವುದೇ ದೇಶ,ಭೂಪ್ರದೇಶ ಮತ್ತು ಅಧಿಕಾರಿಗಳ ಕಾನೂನು ಸ್ಥಿತಿಗತಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯವನ್ನು ವ್ಯಕ್ತಪಡಿಸುದಿಲ್ಲ ಎಂದು ಡಬ್ಲುಎಚ್‌ಒ ತನ್ನ ಡಿಸ್‌ಕ್ಲೇಮರ್‌ನಲ್ಲಿ ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.





