ಆನ್‍ಲೈನ್ ವೇಶ್ಯಾವಾಟಿಕೆ ದಂಧೆ ಆರೋಪ: ದಂಪತಿ ಸೆರೆ

ಬೆಂಗಳೂರು, ಫೆ.4: ಲೊಕೋಂಟೊ ಹೆಸರಿನ ವೆಬ್‍ಸೈಟ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ದಂಪತಿಯನ್ನು ಇಲ್ಲಿನ ವೈಟ್‍ಫೀಲ್ಡ್ ವಿಭಾಗದ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಉಲ್ಲಾಳ ಉಪನಗರದ ವಿಶ್ವೇಶ್ವರ ಲೇಔಟ್‍ನ ಕಿರಣ್‍ರಾಜ್(33), ಆತನ ಪತ್ನಿ ಭಾಸಮತಿದತ್ತ(26) ಬಂಧಿತ ದಂಪತಿಗಳಾಗಿದ್ದಾರೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ದೇವರಾಜು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಬ್ಬರು, ಯುವತಿಯ ಭಾವಚಿತ್ರವನ್ನು ಮೊಬೈಲ್‍ಗಳಲ್ಲಿ ಜಾಹೀರಾತು ನೀಡಿ ಅದನ್ನು ನೋಡಿ ಕರೆ ಮಾಡುವ ಗ್ರಾಹಕರ ಬಳಿಯೇ ಯುವತಿಯರನ್ನು ಕಳುಹಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ನಂತರ ಪೊಲೀಸರಿಗೆ ಅತ್ಯಾಚಾರ ದೂರು ನೀಡಲಾಗುವುದಾಗಿ ಬೆದರಿಸಿ ನಗದು, ಚಿನ್ನಾಭರಣ ಪಡೆದುಕೊಳ್ಳುತ್ತಿದ್ದರು ಎನ್ನುವ ದೂರಿನನ್ವಯ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ದಂಪತಿಯು ಕಳೆದ 2 ವರ್ಷಗಳಿಂದ ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿರುವುದು ತನಿಖೆಯಲ್ಲಿ ಕಂಡು ಬಂದಿದ್ದು, ಇವರಿಂದ ಚಿನ್ನಾಭರಣ ಜಪ್ತಿ ಮಾಡಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.





