ಶೃಂಗೇರಿ ಬಾಲಕಿಯ ಅತ್ಯಾಚಾರ ಪ್ರಕರಣದ ಮುಚ್ಚಿ ಹಾಕುವ ಅಪಾಯವಿದೆ: ಎಂಎಲ್ ಸಿ ನಾರಾಯಣಸ್ವಾಮಿ
ಪ್ರಮುಖ ಆರೋಪಿಗಳ ಬಂಧನಕ್ಕೆ ಮೀನಾಮೇಷ ಯಾಕೆ ?
ಬೆಂಗಳೂರು, ಫೆ.4: ಶೃಂಗೇರಿಯಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂಘಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರೇ ಪ್ರಮುಖ ಆರೋಪಿಗಳಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ಅಪಾಯವಿದೆ ಎಂದು ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಪರಿಷತ್‍ನ ಮಧ್ಯಾಹ್ನದ ಕಲಾಪದಲ್ಲಿ ನಿಯಮ 68ರಡಿ ವಿಷಯ ಪ್ರಸ್ತಾಪಿಸಿದ ಅವರು, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಗುರುತಿಸಿರುವ ಪ್ರಮುಖ ಆರೋಪಿಗಳು ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ರಾಜ್ಯ ಸರಕಾರ ಮೀನಾಮೇಷ ಎಣಿಸುತ್ತಿರಬಹುದೆಂದು ಆರೋಪಿಸಿದ್ದಾರೆ.
ಇತ್ತೀಚಿಗೆ ಶೃಂಗೇರಿಯಲ್ಲಿ ಶಂಕರಾಚಾರ್ಯ ಪ್ರತಿಮೆಯ ಮೇಲೆ ಹಸಿರು ಶಾಲು ಹಾಕಿದ ಪ್ರಕರಣದಲ್ಲಿ ಪ್ರಾರಂಭದಲ್ಲಿ ಮುಸ್ಲಿಮ್ ವ್ಯಕ್ತಿಗಳ ಮೇಲೆ ಆರೋಪಿಸಿ, ಕೋಮು ಗಲಭೆಗೆ ಪ್ರಚೋದನೆ ನೀಡಲಾಯಿತು. ಆದರೆ, ಸಿಸಿ ಟಿವಿ ದೃಶ್ಯಗಳಲ್ಲಿ ಪ್ರಕರಣದ ಪ್ರಮುಖ ಆರೋಪಿ ಸಂಘಪರಿವಾರದ ಸದಸ್ಯನಾಗಿದ್ದರಿಂದ ಪ್ರಕರಣ ಮುಚ್ಚಿ ಹೋಯಿತು. ಅದೇ ರೀತಿಯಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮುಚ್ಚಿ ಹೋಗುವ ಅಪಾಯವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಗಲ್ಲು ಶಿಕ್ಷೆ ಆಗಲಿ: 2016ರಲ್ಲಿ ಸ್ವಾತಿ ಎಂಬ ಸಂತ್ರಸ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಿದೆ. ಅದೇ ಮಾದರಿಯಲ್ಲಿಯೇ ಶೃಂಗೇರಿಯ ಕ್ರಷರ್ ನಲ್ಲಿ ನಡೆದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಭಾಗಿಗಳಾದ ಎಲ್ಲ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ವೇಳೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಬಿಜೆಪಿ ಸದಸ್ಯೆ ತೇಜಸ್ವಿನಿ, ಭಾರತಿ ಶೆಟ್ಟಿ, ಕಾಂಗ್ರೆಸ್ ಸದಸ್ಯೆ ವೀಣಾ ಸೇರಿದಂತೆ ಹಲವರು ವಿಷಯವನ್ನು ಪ್ರಸ್ತಾಪಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಶೃಂಗೇರಿ ಕ್ರಷರ್ ನಲ್ಲಿ ನಡೆದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಯಾವ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸುವಂತಹ ಕಲಂನಲ್ಲಿ ಪ್ರಕರಣ ದಾಖಲಿಸಲಾಗುವುದು.
-ಬಸವರಾಜ ಬೊಮ್ಮಾಯಿ, ಗೃಹ ಮಂತ್ರಿ
ಮನುಷ್ಯತ್ವ ಇರುವ ಯಾವ ಸಂಘಟನೆಗಳು ಅತ್ಯಾಚಾರ ಪ್ರಕರಣವನ್ನು ಬೆಂಬಲಿಸುವುದಿಲ್ಲ. ಸದನದಲ್ಲಿ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸುವುದಕ್ಕೆ ನಾಚಿಕೆ ಆಗುತ್ತದೆ. ಗೃಹ ಸಚಿವರು ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ಭಾರತಿ ಶೆಟ್ಟಿ, ಬಿಜೆಪಿ ಸದಸ್ಯೆ







