ಶನಿವಾರ ದೇಶಾದ್ಯಂತ ಹೆದ್ದಾರಿ ಬಂದ್: 'ಚಕ್ಕಾ ಜಾಮ್’ನಿಂದ ದಿಲ್ಲಿಗೆ ವಿನಾಯಿತಿ
ಎಲ್ಲೆಡೆ ಪೊಲೀಸರ ಸರ್ಪಗಾವಲು

ಹೊಸದಿಲ್ಲಿ, ಫೆ. 5: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಒಕ್ಕೂಟಗಳು ಫೆಬ್ರವರಿ 6ರಂದು ದೇಶಾದ್ಯಂತ ‘ಚಕ್ಕಾ ಜಾಮ್’ (ಹೆದ್ದಾರಿ, ರಸ್ತೆ ಬಂದ್) ಗೆ ಕರೆ ನೀಡಿವೆ.
ಶನಿವಾರ ದಿಲ್ಲಿ ಹೊರತುಪಡಿಸಿ ದೇಶಾದ್ಯಂತ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಎಲ್ಲ ರಸ್ತೆಗಳಲ್ಲಿ ಸಂಚಾರಕ್ಕೆ ಮಧ್ಯಾಹ್ನ 12 ಗಂಟೆಯಿಂದ ಅಪರಾಹ್ನ 3 ಗಂಟೆ ವರೆಗೆ ರೈತ ಒಕ್ಕೂಟಗಳು ತಡೆ ಒಡ್ಡಲಿವೆ. ದೀರ್ಘ ಕಾಲದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಕೇಂದ್ರ ಸರಕಾರ ನಿರ್ವಹಿಸುತ್ತಿರುವ ರೀತಿ, ವಿವಾದಾತ್ಮಕ ಕೃಷಿ ಕಾಯ್ದೆಗಳು, ಪ್ರತಿಭಟನೆ ನಡೆಯುತ್ತಿರುವ ಸ್ಧಳದಲ್ಲಿ ಇಂಟರ್‌ನೆಟ್ ಸ್ಥಗಿತ, ಬಜೆಟ್ ಮುಂಜೂರು ಹಾಗೂ ಇತರ ವಿಷಯಗಳ ಹಿನ್ನೆಲೆಯಲ್ಲಿ ರೈತ ಒಕ್ಕೂಟಗಳು ಈ ‘ಚಕ್ಕಾ ಜಾಮ್’ ನಡೆಸುತ್ತಿವೆ. ಗಣರಾಜ್ಯೋತ್ಸವದ ದಿನ ಟ್ರಾಕ್ಟರ್ ರ್ಯಾಲಿ ನಡೆದ ಬಳಿಕ ಕಳೆದ ವರ್ಷ ನವೆಂಬರ್ 26ರಿಂದ ವಿವಿಧ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಆಯೋಜಿಸುತ್ತಿರುವ ಮೊದಲ ಅತಿ ದೊಡ್ಡ ಪ್ರತಿಭಟನಾ ಕಾರ್ಯಕ್ರಮ ಇದಾಗಿದೆ.
ದಿಲ್ಲಿಯಲ್ಲಿ ‘ಚಕ್ಕಾ ಜಾಮ್’ ಇಲ್ಲ: ದಿಲ್ಲಿ ಹೊರತುಪಡಿಸಿ ದೇಶಾದ್ಯಂತ ಫೆಬ್ರವರಿ 6ರಂದು ಶಾಂತಿಯುತ ‘ಚಕ್ಕಾ ಜಾಮ್’ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಶುಕ್ರವಾರ ಹೇಳಿದ್ದಾರೆ. ದಿಲ್ಲಿಯಲ್ಲಿ ರಸ್ತೆ ತಡೆ ಇಲ್ಲ. ಆದರೆ, ಉತ್ತರಪ್ರದೇಶ, ಹರ್ಯಾಣ ಹಾಗೂ ರಾಜಸ್ಥಾನದ ಭಾಗಗಳನ್ನು ಒಳಗೊಂಡ ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್) ಹಾಗೂ ದಕ್ಷಿಣ ರಾಜ್ಯಗಳು ಸೇರಿದಂತೆ ದೇಶದ ಇತರ ಭಾಗಗಳಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದು ಅವರು ತಿಳಿದ್ದಾರೆ.
ಈ ಸಂದರ್ಭ ಸಿಲುಕಿಕೊಳ್ಳುವ ಜನರಿಗೆ ಆಹಾರ, ನೀರು ಒದಗಿಸಲಾಗುವುದು, ಅವರೊಂದಿಗೆ ಶಾಂತಿಯುತವಾಗಿ ಮಾತುಕತೆ ನಡೆಸಲಾಗುವುದು. ನಮ್ಮ ನಿಲುವನ್ನು ಅವರಿಗೆ ವಿವರಿಸಲಾಗುವುದು ಎಂದು ಅವರು ಹೇಳಿದ್ದಾರೆ. ದಿಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಹೆಚ್ಚುವರಿ ಪಡೆ ನಿಯೋಜನೆ, ರಸ್ತೆಗಳಲ್ಲಿ ಹಲವು ಹಂತದ ಬ್ಯಾರಿಕೇಡ್‌ಗಳು, ತಂತಿಬೇಲಿ ಹಾಗೂ ಲೋಹದ ಮುಳ್ಳುಗಳನ್ನು ಅಳವಡಿಸುವ ಮೂಲಕ ಮೂರು ಪ್ರತಿಭಟನಾ ಸ್ಥಳಗಳ ಸಮೀಪದ ದಿಲ್ಲಿ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪಡೆಗಳ ವಿರುದ್ಧ ವದಂತಿ ಹಬ್ಬಿಸುವವರ ಮೇಲೆ ಕಣ್ಗಾವಲು ಇರಿಸಲು ಸಾಮಾಜಿಕ ಮಾಧ್ಯಮದ ವಿಷಯಗಳ ಬಗ್ಗೆ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರ್ಯಾಣದಲ್ಲಿ ಬಂದೋಬಸ್ತ್: ಹರ್ಯಾಣದಲ್ಲಿ ಪೊಲೀಸರು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಭದ್ರತೆ, ಪ್ರಮುಖ ಜಂಕ್ಷನ್ ಹಾಗೂ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ದಿಲ್ಲಿ ಪೊಲೀಸ್ ಆಯುಕ್ತರನ್ನು ಭೇಟಿಯಾದ ಅಮಿತ್ ಶಾ: ಈ ನಡುವೆ ಕೇಂದ್ರ ಗೃಹ ಸಚಿವ ಸಚಿವ ಅಮಿತ್ ಶಾ ದಿಲ್ಲಿಯ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾತ್ಸವ ಅವರನ್ನು ಭೇಟಿಯಾಗಿದ್ದಾರೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 6ರಂದು ನಡೆಯುವ ಚಕ್ಕಾ ಜಾಮ್‌ಗೆ ನಾವು ಬೆಂಬಲಿಸುವುದಿಲ್ಲ ಎಂದು ಬಿಜೆಪಿಯ ಕೃಷಿಕ ಸಂಘಟನೆ ಭಾರತೀಯ ಕಿಸಾನ್ ಸಂಘ ಹೇಳಿದೆ.







