ಪ್ರೊ.ಭಗವಾನ್ ಅವರಿಗೆ ಮಸಿ ಬಳಿದ ಘಟನೆ ಖಂಡಿಸಿ ದಸಂಸ ಪ್ರತಿಭಟನೆ

ಮೈಸೂರು: ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರಿಗೆ ಮಸಿ ಬಳಿದ ಘಟನೆ ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ವಕೀಲೆ ಮೀರಾ ರಾಘವೇಂದ್ರ ಅವರನ್ನು ಕೂಡಲೇ ಬಂಧಿಸಬೇಕು. ಅವರನ್ನು ವಕೀಲಿ ವೃತ್ತಿಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಧಿಕ್ಕಾರ ಕೂಗಿದರು.
ಇದೇ ವೇಳೆ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಪ್ರೊ.ಕೆ.ಎಸ್.ಭಗವಾನ್ ಅಂತಹ ದೊಡ್ಡ ಸಾಹಿತಿಗಲ್ಲ ಮಸಿ ಬಳಿದಿರುವುದು, ಇಡೀ ಶೂದ್ರ ಸಮುದಾಯಕ್ಕೆ ಮಸಿ ಬಳಿದಿರುವುದು. ಶೂದ್ರರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ನಾವು ಹಿಂದೂ ಧರ್ಮ ವಿರೋಧಿಗಳಲ್ಲ, ಹಿಂದುತ್ವದ ವಿರೋಧಿಗಳು, ಅಲ್ಲಿರುವ ಅಸ್ಪೃಶ್ಯತೆ ನಿವಾರಣೆ ಮಾಡಿ, ಲಿಂಗ ತಾರತಮ್ಯ ನಿವಾರಣೆ ಮಾಡಿ, ಭಿನ್ನಬೇದ ನಿವಾರಣೆ ಮಾಡಿ. ಎಲ್ಲರನ್ನೂ ಒಳಗೊಳ್ಳುವ ಹಿಂದೂ ಧರ್ಮ ಬೇಕು. ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಎಂಬ ವರ್ಣ ಬೇಧದ ಹಿಂದೂ ಧರ್ಮ ಬೇಡ, ನಾವು ಅದರ ವಿರೋಧಿಗಳು ಎಂದು ಹೇಳಿದರು.
ಯಾವುದೇ ಧರ್ಮ ದೇಶ ಆಳಬಾರದು, ಧರ್ಮ ಮತ್ತು ರಾಜಕಾರಣದ ನಡುವೆ ಸಂಬಂಧ ಇರಬಾರದು. ಹಿಂದುತ್ವ ರಾಷ್ಟ್ರ ಆಗಬಾರದು. ಬಹುತ್ವ ರಾಷ್ಟ್ರ ಆಗಬೇಕು ಎಂದು ನಾರಾಯಣ ಗುರು, ಪೆರಿಯಾರ್, ಮಹಾತ್ಮ ಪುಲೆ, ಸಂತ ಕಬೀರ, ಅಂಬೇಡ್ಕರ್ ಸೇರಿದಂತೆ ಎಲ್ಲರೂ ಹೇಳಿದ್ದಾರೆ. ಗಾಂಧಿಯನ್ನು ಕೊಂದವರಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮೋದ್ ಮುತಾಲಿಕ್ ಶ್ರೀರಾಮ ಸೇನೆ ಸಂಘಟನೆ ಮಾಡಿ ವಿದೇಶದಿಂದ ಹಣ ಪಡೆದು ಹೊಟ್ಟೆಪಾಡಿಗಾಗಿ ರೋಲ್ ಕಾಲ್ ನಾಯಕರಾಗಿದ್ದಾರೆ ಎಂದು ಕಿಡಿಕಾರಿದರು.
ಭಗವಾನ್ ಗೆ ವೈಚಾರಿಕತೆ, ಸಂವಿಧಾನ ಬಹುತ್ವ ಬೇಕು, ಅಂತವರಿಗೆ ಮಸಿ ಬಳಿಯುವ ಮೂಲಜ ಮಸಿ ರಾಘವೇಂದ್ರರಾಗಿದ್ದಾರೆ. ಪೂಲನ್ ದೇವಿ ಶೋಷಿತರ ಪರ, ಮಹಿಳೆಯರ ಪರ ಹೋರಾಟ ಮಾಡಿದರು. ಆದರೆ ಮಸಿ ರಾಘವೇಂದ್ರ ಯಾರ ಪರ ಹೋರಾಟ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸ್ವರಾಜ್ ಇಂಡಿಯಾ ಜಿಲ್ಲಾಧ್ಯಕ್ಷ ಉಗ್ರ ನರಸಿಂಹೇಗೌಡ ಮಾತನಾಡಿ, ಪ್ರೊ.ಕೆ.ಎಸ್.ಭಗವಾನ್ ರಾಮಾಯಣ ಮತ್ತು ಮಹಾಭಾರತದಲ್ಲಿರುವ ಅಂಶಗಳನ್ನು ಇಟ್ಟುಕೊಂಡು ಉಲ್ಲೇಖ ಮಾಡುತ್ತಿದ್ದಾರೆ. ಅವರೇನು ಸ್ವಂತವಾಗಿ ವಿಚಾರ ಹರಡುತ್ತಿಲ್ಲ. ಇರುವ ವಿಚಾರ ಹೇಳಿದರೆ ಇವರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ ಎಂದು ಹರಿಹಾಯ್ದರು.
ಎಸ್ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಭಗವಾನ್ ಮೇಲಿನ ಹತ್ಯೆ ಸರ್ವಾಧಿಕಾರದಿಂದ ಕೂಡಿದೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಭಿನ್ನಾಭಿಪ್ರಾಯ ಇರಬೇಕು, ಆದರೆ ವ್ಯಕ್ತಿಗತವಾಗಿ ಹಲ್ಲೆಮಾಡುವುದು, ಮಸಿ ಬಳಿಯುವುದು ಅತ್ಯಂತ ಖಂಡನೀಯ. ಇವರಿಗೆ ದೊಡ್ಡ ಮಟ್ಟದಲ್ಲಿ ಪ್ರತಿರೋಧ ಒಡ್ಡುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ದಸಂಸ ಮುಖಂಡರುಗಳಾದ ಶಂಭುಲಿಂಗಸ್ವಾಮಿ, ಕೆ.ವಿ.ದೇವೇಂದ್ರ, ಸಣ್ಣಯ್ಯ ಲಕ್ಕೂರು, ರೈತ ಸಂಘದ ಪಿ.ಮರಂಕಯ್ಯ, ಅರಸಿನಕೆರೆ ಶಿವರಾಜು, ಅಮ್ಜದ್ ಖಾನ್, ಮುಳ್ಳೂರು ಪ್ರಕಾಶ್, ನಾಗನಹಳ್ಳಿ ಚಂದ್ರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಕರಿ ಕೋಟು ಧರಿಸಿ ವಿಚಾರವಾಧಿ ಪ್ರೊ.ಕೆ.ಎಸ್.ಭಗವಾನ್ ರವರಿಗೆ ಮಸಿ ಬಳಿದಿರುವುದು ಅತ್ಯಂತ ಖಂಡನೀಯ. ಅವರ ಮೇಲೆ ದಾಳಿ ನಡೆಸಿರುವ ಮನುವಾದಿ ವಕೀಲೆ ಮೀರಾ ರಾಘವೇಂದ್ರ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಅವರನ್ನು ವಕೀಲಿ ವೃತ್ತಿಯಿಂದ ವಜಾಗೊಳಿಸಬೇಕು.
- ಶಂಭುಲಿಂಗಸ್ವಾಮಿ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ
ವಕೀಲೆ ಮೀರಾ ರಾಘವೇಂದ್ರ ಓರ್ವ ರೋಗಿಷ್ಟ್. ಈಕೆ ಒಬ್ಬಳೇ ಈ ಕೃತ್ಯ ನಡೆಸಿಲ್ಲ. ಇದರ ಹಿಂದೆ ದೊಡ್ಡ ಜಾಲವೇ ಅಡಗಿದೆ. ಹಾಗಾಗಿ ತನಿಖೆ ನಡೆಸಿ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಗೊಳಿಸಬೇಕು.
- ಚೋರನಹಳ್ಳಿ ಶಿವಣ್ಣ, ದಸಂಸ ಜಿಲ್ಲಾ ಸಂಚಾಲಕ.







