ಬಾಡಿಗೆ ವಿಚಾರದ ಜಗಳ ನಿವೃತ್ತ ಉಪ ತಹಶೀಲ್ದಾರ್ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಫೆ.5: ಬಾಡಿಗೆ ವಿಚಾರದಲ್ಲಿ ಜಗಳವಾಗಿ ನಿವೃತ್ತ ಉಪ ತಹಶೀಲ್ದಾರ್ ಅವರನ್ನು ಕೊಲೆಗೈದಿರುವ ಘಟನೆ ಇಲ್ಲಿನ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾಜೇಶ್ವರಿ(60) ಕೊಲೆಯಾಗಿರುವ ನಿವೃತ್ತ ಉಪ ತಹಸೀಲ್ದಾರ್ ಎಂದು ತಿಳಿದುಬಂದಿದ್ದು, ಪ್ರಕರಣ ಸಂಬಂಧ ಆಲಂ ಪಾಷಾ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾರ್ವತಿಪುರದಲ್ಲಿ ರಾಜೇಶ್ವರಿ ಅವರಿಗೆ ಸೇರಿದ ಮನೆಯನ್ನು ಆಲಂ ಪಾಷಾ ಅವರಿಗೆ ಬಾಡಿಗೆಗೆ ನೀಡಿದ್ದರು. ನಾಲ್ಕೈದು ತಿಂಗಳಿನಿಂದ ಬಾಡಿಗೆದಾರ ಬಾಡಿಗೆ ನೀಡದ ಕಾರಣ ಮನೆ ಬಳಿ ಹೋಗಿ ರಾಜೇಶ್ವರಿ ಬಾಡಿಗೆ ಹಣ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾದಾಗ ರಾಜೇಶ್ವರಿ ಅವರನ್ನು ಮನೆಯೊಳಗೆ ಎಳೆದು ಬಾಡಿಗೆದಾರ ಕತ್ತುಕೊಯ್ದು ಕೊಲೆ ಮಾಡಿ ನಂತರ ಶವವನ್ನು ಆಟೊದಲ್ಲಿ ಬಿಡದಿ ಬಳಿ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.
ರಾಜೇಶ್ವರಿ ಅವರು ಕಾಣೆಯಾದ ಬಗ್ಗೆ ವಿವಿ ಪುರಂ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿವಿ ಪುರಂ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ರಾಜೇಶ್ವರಿ ಕೊಲೆಯಾಗಿರುವುದು ಕಂಡುಬಂದಿದೆ.
ಪ್ರಕರಣ ಸಂಬಂಧ ಆರೋಪಿ ಆಲಂ ಪಾಷಾನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.







