ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಪಕ್ಷಗಳಿಂದ ಪ್ರತಿಭಟನೆ: ಲೋಕಸಭೆಯ ಕಲಾಪ ಮುಂದೂಡಿಕೆ
ಹೊಸದಿಲ್ಲಿ, ಫೆ. 5: ಕೃಷಿ ಕಾಯ್ದೆಗಳ ಕುರಿತು ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಸೋಮವಾರದ ವರೆಗೆ ಮುಂದೂಡಲಾಯಿತು. ಸದನ ಶುಕ್ರವಾರ ಅಪರಾಹ್ನ 4 ಗಂಟೆಗೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ಎಡ ಪಕ್ಷಗಳು ಹಾಗೂ ಡಿಎಂಕೆ ಸದಸ್ಯರು ಸದನದ ಬಾವಿಗಿಳಿದು ನೂತನ ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು ಹಾಗೂ ಫಲಕಗಳನ್ನು ಪ್ರದರ್ಶಿಸಿದರು.
ರಾಜ್ಯಸಭೆಯಲ್ಲಿ ಶಿವಸೇನೆ, ಎಸ್‌ಎಡಿ, ಎನ್‌ಸಿಪಿ, ಸಮಾಜವಾದಿ ಪಕ್ಷ ಹಾಗೂ ಎಡ ಪಕ್ಷಗಳಂತಹ ವಿವಿಧ ಪ್ರತಿಪಕ್ಷಗಳು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹಾಗೂ ವ್ಯಾಪಕ ಸಮಾಲೋಚನೆಯ ಬಳಿಕ ಹೊಸ ಕಾಯ್ದೆಗಳನ್ನು ಜಾರಿಗೆ ತರುವಂತೆ ಆಗ್ರಹಿಸಿದವು. ರಾಷ್ಟ್ರಪತಿ ಅವರ ಭಾಷಣದ ಬಳಿಕ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷದ ಸದಸ್ಯರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ದೇಶ ವಿರೋಧಿಗಳಂತೆ ಬಿಂಬಿಸುತ್ತಿರುವ ಹಾಗೂ ತಮ್ಮ ಚಳವಳಿಯ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿರುವ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಯಾರಾದರೂ ಸತ್ಯ ಮಾತನಾಡಿದರೆ ಅವರನ್ನು ದೇಶದ್ರೋಹಿಗಳು ಹಾಗೂ ದೇಶ ವಿರೋಧಿಗಳಂತೆ ಬಿಂಬಿಸಲಾಗುತ್ತಿದೆ. ಸರಕಾರದ ಕುರಿತು ಟೀಕಿಸುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಹೇಳಿದರು. ರೈತರ ಕಲ್ಯಾಣದ ಬಗ್ಗೆ ಮಾತನಾಡುತ್ತಿರುವ ಕೇಂದ್ರ ಸರಕಾರ ಕೃಷಿ ತಿದ್ದುಪಡಿ ಮಸೂದೆಯನ್ನು ಈ ಮೊದಲೇ ವಿಶಾಲ ಸಮಾಲೋಚನೆಗೆ ಆಯ್ಕೆ ಸಮಿತಿಗೆ ಕಳುಹಿಸಿ ಕೊಡಬಹುದಿತ್ತು. ಇದರಿಂದ ಈಗ ಸೃಷ್ಟಿಯಾದ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು. ಇದನ್ನು ಕೇಂದ್ರ ಸರಕಾರ ಯಾಕೆ ಮಾಡಿಲ್ಲ ಎಂದು ಎನ್‌ಸಿಪಿಯ ಪ್ರಫುಲ್ ಪಟೇಲ್ ಪ್ರಶ್ನಿಸಿದರು.







