ಕಂಗನಾ ವಿರುದ್ಧದ ಪ್ರಕರಣದ ತನಿಖೆಯ ಪ್ರಗತಿ ವರದಿ ಸಲ್ಲಿಸಲು ಕೋರ್ಟ್ ಸೂಚನೆ

ಮುಂಬೈ, ಫೆ.5: ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಹುಟ್ಟಿಸುವ ಸಂದೇಶಗಳನ್ನು ಟ್ವೀಟ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ನಟಿ ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯ ಪ್ರಗತಿ ವರದಿ ಸಲ್ಲಿಸುವಂತೆ ಮುಂಬೈಯ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಕಂಗನಾ ಹಾಗೂ ಆಕೆಯ ಸಹೋದರಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಕಳೆದ ವರ್ಷ ವಕೀಲರೊಬ್ಬರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿ 2020ರ ಡಿಸೆಂಬರ್ 5ರೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಅಂಬೋಲಿ ಉಪನಗರ ಪೊಲೀಸರಿಗೆ ಸೂಚಿಸಿತ್ತು. ಆದರೆ ಪೊಲೀಸರು ವರದಿ ಸಲ್ಲಿಸಲು ವಿಫಲವಾದ ಕಾರಣ ಗಡುವನ್ನು ಜನವರಿ 5ಕ್ಕೆ, ಬಳಿಕ ಫೆಬ್ರವರಿ 5ಕ್ಕೆ ವಿಸ್ತರಿಸಿತ್ತು.
ಗಡುವು ವಿಸ್ತರಿಸಿದರೂ ಪೊಲೀಸರು ವರದಿ ಒಪ್ಪಿಸಿಲ್ಲ. ಆದ್ದರಿಂದ ತನಿಖೆಯ ಪ್ರಗತಿ ವರದಿ ಸಲ್ಲಿಸುವಂತೆ ಸೂಚಿಸುವ ಜೊತೆಗೆ, ನ್ಯಾಯಾಲಯ ‘ಇಷ್ಯುವೆನ್ಸ್ ಆಫ್ ಪ್ರೊಸೆಸ್’ ಪ್ರಕ್ರಿಯೆ ಆರಂಭಿಸಬೇಕು ಎಂದು ದೂರುದಾರರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. (‘ಇಷ್ಯುವೆನ್ಸ್ ಆಫ್ ಪ್ರೊಸೆಸ್’ ಪ್ರಕ್ರಿಯೆಯಲ್ಲಿ, ಯಾರ ವಿರುದ್ಧ ದೂರು ಸಲ್ಲಿಕೆಯಾಗಿದೆಯೋ ಆ ವ್ಯಕ್ತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕು). ವಾದ ಆಲಿಸಿದ ನ್ಯಾಯಾಲಯ, ತನಿಖೆಯ ಪ್ರಗತಿ ವರದಿ ಸಲ್ಲಿಸುವಂತೆ ಸೂಚಿಸಿ ಮಾರ್ಚ್ 4ಕ್ಕೆ ಮುಂದಿನ ವಿಚಾರಣೆ ನಿಗದಿಗೊಳಿಸಿದೆ.







