ಫೆ.6ರಂದು ಕರವೇಯಿಂದ 'ರೈತರೊಂದಿಗೆ ಕರ್ನಾಟಕ' ಟ್ವಿಟರ್ ಅಭಿಯಾನ
ಬೆಂಗಳೂರು, ಫೆ.5: ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳ ವಾಪಸ್ಸಾತಿಗೆ ಆಗ್ರಹಿಸಿ ರೈತ ಸಂಘಟನೆಗಳು ಹೊಸದಿಲ್ಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಫೆ.6ರಂದು 'ರೈತರೊಂದಿಗೆ ಕರ್ನಾಟಕ' ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ ಎಂದು ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ಜನತೆ ರೈತರೊಂದಿಗೆ ಇದ್ದೇವೆ ಎಂಬುದನ್ನು ಸಾಬೀತು ಪಡಿಸಬೇಕಾಗಿದೆ. ಆ ಮೂಲಕ ಪ್ರತಿಭಟನಾನಿರತ ರೈತರಿಗೆ ಆತ್ಮವಿಶ್ವಾಸ ತುಂಬಬೇಕಾಗಿದೆ ಎಂದು ತಿಳಿಸಿದ್ದಾರೆ.
ರೈತ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹೂಡಿ ಬಂಧಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಿ, ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದನ್ನು ನಾವು ಪ್ರತಿಭಟಿಸಬೇಕಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ದೇಶದ ರೈತರ ಐತಿಹಾಸಿಕ ಹೋರಾಟಕ್ಕೆ ಈಗ ಜಗತ್ತಿನಾದ್ಯಂತ ಬೆಂಬಲ ಲಭ್ಯವಾಗಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಧ್ವನಿಯಲ್ಲಿ ರೈತರ ಹೋರಾಟವನ್ನು ಬೆಂಬಲಿಸಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯವು ಈ ದೊಡ್ಡ ಆಂದೋಲನದ ಜತೆ ಇದೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿದೆ. ದೆಹಲಿಯಲ್ಲಿ ಕೊರೆಯುವ ಚಳಿಯಲ್ಲಿ ತಿಂಗಳುಗಳಿಂದ ಪ್ರತಿಭಟನೆಯಲ್ಲಿ ತೊಡಗಿರುವ ಅನ್ನದಾತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಬೇಕಿದೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿವೆ. ಭಾರತ ಸಂವಿಧಾನದ ಪ್ರಕಾರ ಕೃಷಿ ವಿಷಯ ರಾಜ್ಯಪಟ್ಟಿಯಲ್ಲಿರುವ ವಿಷಯ. ಇದರ ಕುರಿತು ಕಾಯ್ದೆ ರೂಪಿಸುವ ಹಕ್ಕು ಕೇಂದ್ರ ಸರಕಾರಕ್ಕೆ ಇಲ್ಲ. ಅದರ ಜತೆಗೆ ಜಾರಿಗೆ ತಂದಿರುವ ಕಾಯ್ದೆಗಳು ಕರಾಳವಾಗಿದ್ದು, ಇಡೀ ರೈತಸಂಕುಲವನ್ನು ಕಾರ್ಪೋರೇಟ್ ಶಕ್ತಿಗಳ ಗುಲಾಮರನ್ನಾಗಿಸುತ್ತವೆ. ಹೀಗಾಗಿ ಇವುಗಳನ್ನು ಒಪ್ಪುವ ಪ್ರಶ್ನೆಯೇ ಇಲ್ಲವೆಂದು ರಾಜ್ಯ ಜನತೆ ಸಾರಿ ಹೇಳಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.







