ಎಸ್ಸಿ-ಎಸ್ಟಿ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಶೇ.85ರಷ್ಟು ವೆಚ್ಚ ಮಾಡಲು ಕ್ರಮ: ಯಡಿಯೂರಪ್ಪ
ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಖರ್ಚು ವಿಚಾರದಲ್ಲಿ ಆಡಳಿತ-ವಿಪಕ್ಷ ಸದಸ್ಯರ ನಡುವೆ ಜಟಾಪಟಿ

ಬೆಂಗಳೂರು, ಫೆ. 5: ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ವರ್ಗ(ಎಸ್ಟಿ)ಗಳ ಕಲ್ಯಾಣಕ್ಕಾಗಿ ಎಸ್ಟಿಪಿ-ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ವೆಚ್ಚ ಮಾಡುವ ವಿಚಾರ ಆಡಳಿತ ಮತ್ತು ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ, ಆರೋಪ-ಪ್ರತ್ಯಾರೋಪ ಕಾರಣವಾಯಿತು. ಅಲ್ಲದೆ, ಉಭಯರ ನಡುವೆ ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿದ್ದು ನಡೆಯಿತು.
ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಹಿಂದೆ ಆಡಳಿತ ನಡೆಸಿದ ಯಾವುದೇ ಸರಕಾರ ಎಸ್ಸಿ-ಎಸ್ಟಿಗಳಿಗೆ ನೀಡಿರುವುದಕ್ಕಿಂತ ಹೆಚ್ಚಿನ ಅನುದಾನ ನೀಡಿದ್ದು, ಪರಿಶಿಷ್ಟರ ಕಲ್ಯಾಣಕ್ಕೆ ಕ್ರಮ ವಹಿಸಿದೆ ನಮ್ಮ ಸರಕಾರ ಎಂದರು.
ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಕಾರ್ಯ ನಿರ್ವಹಿಸಿಲ್ಲ. ಹೀಗಾಗಿ ಅನುದಾನ ಉಳಿದಿದ್ದು, ಆ ಮೊತ್ತವನ್ನು ಬಳಕೆ ಮಾಡಲು ಸರಕಾರ ಕ್ರಮ ವಹಿಸಲಿದೆ ಎಂದ ಅವರು, ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನದ ಪೈಕಿ ಶೇ.80ರಿಂದ 85ರಷ್ಟು ಮೊತ್ತವನ್ನು ಬಳಕೆ ಮಾಡುವ ಮೂಲಕ ಅವರ ಅಭಿವೃದ್ಧಿ ಆಸ್ಥೆ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಪರಿಶಿಷ್ಟರ ಕಲ್ಯಾಣಕ್ಕಾಗಿ ನಮ್ಮ ಸರಕಾರ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭೂ ಒಡೆತನ ಯೋಜನೆಯಡಿ ಒಟ್ಟು 4835 ಎಕರೆ ಭೂಮಿ ಖರೀದಿಸಿ ಎಸ್ಸಿ-ಎಸ್ಟಿ ಸಮುದಾಯದ ಫಲಾನುಭವಿಗಳಿಗೆ ನೀಡಲಾಗಿದೆ. ಅಂಕಿ-ಅಂಶಗಳೊಂದಿಗೆ ಬಹಿರಂಗ ಚರ್ಚೆಗೂ ಸರಕಾರ ಸಿದ್ಧ ಎಂದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್ಟಿಪಿ-ಟಿಎಸ್ಪಿ ಕಾಯ್ದೆ ಜಾರಿಗೆ ತಂದಿದ್ದು ನಮ್ಮ ಸರಕಾರ. ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟರಿಗೆ ಅನುದಾನ ನಿಗದಿಪಡಿಸಬೇಕಿದ್ದು, 2017-18ನೆ ಸಾಲಿನಲ್ಲಿ 30 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಈ ಸರಕಾರ ಕೇವಲ 25 ಸಾವಿರ ಕೋಟಿ ರೂ. ಮೀಸಲಿಡುವ ಮೂಲಕ ಪರಿಶಿಷ್ಟರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಗುತ್ತಿಗೆ ಮೀಸಲಾತಿ 1 ಕೋಟಿ ರೂ.ಗೆ ಹೆಚ್ಚಿಸಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ 50ಲಕ್ಷ ರೂ.ವರೆಗೆ ಮೀಸಲಾತಿ ಕಲ್ಪಿಸಿದ್ದು, ಅದನ್ನು 1 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ ಸಿದ್ದರಾಮಯ್ಯ, ನಮ್ಮದು ಹಗರಣ ರಹಿತ ಸರಕಾರವಾಗಿತ್ತು. ಈ ಸರಕಾರ ಐದು ದಿನಗಳಲ್ಲಿ ನಾಲ್ಕು ಬಾರಿ ಸಚಿವರ ಖಾತೆ ಬದಲಾವಣೆ ಮಾಡಿದರೂ ಸಮರ್ಥ ಮುಖ್ಯಮಂತ್ರಿ ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಬರಗಾಲವಿತ್ತು, ಬಳಿಕ ಪ್ರವಾಹ ಎದುರಾಯಿತು. ಅನಂತರ ಕೊರೋನ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ಇನ್ನು ಹಣ ವೆಚ್ಚ ಮಾಡಿಲ್ಲ. ಮಾರ್ಚ್ ಅಂತ್ಯದ ವೇಳೆ ಎಲ್ಲ ಮೊತ್ತವನ್ನು ವೆಚ್ಚ ಮಾಡುವುದಲ್ಲದೆ ಪರಿಶಿಷ್ಟರ ಕಲ್ಯಾಣಕ್ಕೆ ಸರಕಾರ ಕ್ರಮ ವಹಿಸಲಿದೆ ಎಂದು ಭರವಸೆ ನೀಡಿದರು.
ಇಬ್ಬರು ಸೇರಿ ತಿದ್ದುಪಡಿ ತನ್ನಿ: ಈ ಗದ್ದಲದ ಮಧ್ಯೆ ಪ್ರತಿಕ್ರಿಯಿಸಿದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್, ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟ ಅನುದಾನದ ಉಳಿಕೆ ಮೊತ್ತವನ್ನು (ಡೀಮ್ಡ್) ಕಾಯ್ದೆಯ 7ಡಿ'ಗೆ ತಿದ್ದುಪಡಿ ತರಲು ಎರಡೂ ಪಕ್ಷಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.







