ಮಸಿ ಬಳಿದ ಕೃತ್ಯ ಖಂಡಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ: ವಕೀಲೆಯ ಬಂಧನಕ್ಕೆ ಆಗ್ರಹ

ಮಂಡ್ಯ, ಫೆ.5: ಸಾಹಿತಿ, ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಕೃತ್ಯ ಖಂಡಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಶುಕ್ರವಾರ ಸಂಜೆ ನಗರದಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಸಿ ಬಳಿ ವಕೀಲೆ ಮೀರಾ ರಾಘವೇಂದ್ರ ಅವರ ವಿರುದ್ಧ ಪೊಲೀಸ್ ಅಥವಾ ನ್ಯಾಯಾಲಯವೇ ಸ್ವಯಂಪ್ರೇರಿತ (ಸುವೋಮೋಟೋ) ಪ್ರಕರಣ ದಾಖಲಿಸಿ ಬಂಧಿಸಬೇಕು. ಅವರನ್ನು ಕೂಡಲೇ ಬಾರ್ ಕೌನ್ಸಿಲ್‍ನಿಂದ ಹೊರ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಮೀರಾ ಮಸಿ ಬಳಿದದ್ದು ವಕೀಲರ ವೃತ್ತಿ ಸಂಹಿತೆಗೆ, ನ್ಯಾಯಾಂಗದ ಪಾವಿತ್ರ್ಯತೆಗೆ, ಈ ದೇಶದ ಸಂವಿಧಾನಕ್ಕೆ ಅಪಮಾನ. ಒಂದು ವೇಳೆ ಆಕೆಯಲ್ಲಿ ಇದ್ದದ್ದು ಆಸಿಡ್ ಆಗದ್ದರೆ ಅಥವಾ ರಿವಾಲ್ವರ್ ಆಗಿದ್ದರೆ ಏನು ಗತಿ. ನ್ಯಾಯಾಲಯದ ಅಂಗಳದಲ್ಲಿ ಇಂತಹ ಗೂಂಡಾಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕಾದ ಕರ್ತವ್ಯ ನ್ಯಾಯಾಂಗದ್ದು ಮತ್ತು ಸರಕಾರದ್ದು ಎಂದು ಅವರು ತಾಕೀತು ಮಾಡಿದರು.
ಕೋರ್ಟಿನಂಗಳದಲ್ಲಿ ಸಮವಸ್ತ್ರ ಧರಿಸಿರುವುದನ್ನೇ ಮರೆತು ಪ್ರೊ.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆ ವಕೀಲರ ವೃತ್ತಿ ಘನತೆಗೆ ವಿರುದ್ಧದ ಅಪಚಾರ, ಅತ್ಯಂತ ಖಂಡನೀಯ. ಸ್ವತಃ ಭಗವಾನ್ ವಿರುದ್ಧ ಕೇಸ್ ದಾಖಲಿಸಿದ ಮೀರಾ, ನ್ಯಾಯಾಲಯದ ಮೇಲೆ ವಿಶ್ವಾಸವಿಲ್ಲ ಎನ್ನುವ ರೀತಿ ಕಾನೂನು ಕೈಗೆತ್ತಿಕೊಂಡು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದ್ದಾರೆ. ಈ ಕೃತ್ಯವು ಸಮಾಜ ಘಾತಕವಾದ್ದರಿಂದ ಮೀರಾ ಮೇಲೆ ಗಂಭೀರ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಪ್ರೊ.ಹುಲ್ಕೆರೆ ಮಹಾದೇವು, ಪ್ರೊ.ಜಿ.ಟಿ.ವೀರಪ್ಪ, ಅಖಿಲದ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕೃಷಿಕೂಲಿಕಾರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು, ಹನುಮೇಶ್, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಜನಶಕ್ತಿಯ ಸಿದ್ದರಾಜು, ನಾರಾಯಣ್ ತಳಗವಾದಿ, ರೈತಸಂಘದ ಮುದ್ದೇಗೌಡ, ದಸಂಸ ದೇವರಾಜು ತಿರುಮಲಪುರ, ಗಂಜಾಂ ರವಿ, ಕೂಲಿಕಾರರ ಸಂಘದ ವಸಂತ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.








