ಸೇಂಟ್ ಜೋಸೆಫ್ ವಿವಿ ವಿಧೇಯಕ ಸೇರಿ 3 ವಿಧೇಯಕಗಳ ಅಂಗೀಕಾರ
ಬೆಂಗಳೂರು, ಫೆ.5: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ವಿಧೇಯಕ-2021 ಸೇರಿ ಮೂರು ವಿಧೇಯಕಗಳಿಗೆ ವಿಧಾನಪರಿಷತ್‍ನಲ್ಲಿ ಶುಕ್ರವಾರ ದ್ವನಿ ಮತದ ಅಂಗೀಕಾರ ದೊರೆಯಿತು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ(ತಿದ್ದುಪಡಿ) ವಿಧೇಯಕ-2020, ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ(ಎರಡನೆ ತಿದ್ದುಪಡಿ) ವಿಧೇಯಕ-2020ವನ್ನು ಪರಿಷತ್‍ನಲ್ಲಿ ಅಂಗೀಕರಿಸಲಾಯಿತು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಿ ಅನುಮೋದನೆ ನೀಡುವಂತೆ ಸದನಕ್ಕೆ ಮನವಿ ಮಾಡಿದರು. ಈ ವೇಳೆ ಅಶ್ವತ್ಥನಾರಾಯಣ ಅವರು ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ದೇಶದಲ್ಲೇ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೂರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ವಿಶ್ವವಿದ್ಯಾಲಯಗಳನ್ನಾಗಿ ಮಾಡಲಾಗುತ್ತಿದೆ. ಅದರಲ್ಲಿ ಇದು ಕೂಡಾ ಒಂದು. ವಿವಿ ಸ್ಥಾಪನೆಯಿಂದ ಸಂಸ್ಥೆಗೆ ಸ್ವಾಯತತ್ತೆ ಕೊಡುವ ಜತೆಗೆ ಮತ್ತಷ್ಟು ಗುಣಮಟ್ಟ ಹೆಚ್ಚಾಗಲು ಸಹಕಾರಿಯಾಗಲಿದೆ. ಹೀಗಾಗಿ, ಸದನ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ತೋಟಗಾರಿಕೆ ವಿಜ್ಞಾನಗಳ ವಿವಿ(ತಿದ್ದುಪಡಿ) ವಿಧೇಯಕಕ್ಕೆ ವಿರೋಧ: ತೋಟಗಾರಿಕೆ ವಿಜ್ಞಾನಗಳ ವಿವಿ ವಿಧೇಯಕ ಅಂಗೀಕಾರಕ್ಕೆ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಐಸಿಆರ್ ಸಮಿತಿಯಲ್ಲಿ ಮೂವರು ರೈತರು ಇರಬೇಕು. ಆದರೆ, ಇಬ್ಬರು ರೈತರಿಗೆ ಮಾತ್ರ ಅವಕಾಶ ನೀಡಿ, ರೈತರ ಭಾವನೆಗಳಿಗೆ ಧಕ್ಕೆ ತಂದಿದ್ದಿರಿ ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದರು.
ಸಚಿವ ಆರ್.ಶಂಕರ್ ಅವರು, ತೋಟಗಾರಿಕೆ ವಿಜ್ಞಾನಗಳ ವಿವಿ(ತಿದ್ದುಪಡಿ) ವಿಧೇಯಕ ಮಂಡನೆಗೆ ಅವಕಾಶ ನೀಡಿದರೆ, ಐಸಿಆರ್ ಸಮಿತಿಯಿಂದ ಅನುದಾನ ಬರುತ್ತದೆ ಎಂದು ಹೇಳಿದರು. ಈ ಮನವಿಯನ್ನು ಮಾನ್ಯ ಮಾಡದ ವಿರೋಧ ಪಕ್ಷದ ಸದಸ್ಯರು ಸದನದಿಂದ ಹೊರ ನಡೆದರು.







