ಪೊಲೀಸರನ್ನು ಬಳಸಿ ವ್ಯವಹಾರ ಆರೋಪ : ಸಮಗ್ರ ವರದಿ ನೀಡಲು ಎಡಿಜಿಪಿ ಸೂಚನೆ
ಆರೋಪಿಗಳಿಂದ ವಶಪಡಿಸಿದ ವಾಹನ ನಾಪತ್ತೆ ಪ್ರಕರಣ
ಮಂಗಳೂರು, ಫೆ.6: ಸಿಸಿಬಿ ಪೊಲೀಸರನ್ನು ಬಳಸಿ ನಡೆಸಲಾಗಿದೆ ಎನ್ನಲಾದ ಹಣದ ವ್ಯವಹಾರಕ್ಕೆ ಸಂಬಂಧಿ ಸಮಗ್ರ ವರದಿ ನೀಡುವಂತೆ ಎಡಿಜಿಪಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಿಚಾರಣಾಧಿಕಾರಿಗಳು ನೋಟಿಸ್ ಜಾರಿಗೆ ಸಿದ್ಧತೆ ನಡೆಸಿದ್ದಾರೆ.
ಆರೋಪಿಗಳಿಂದ ವಶಪಡಿಸಿದ ವಾಹನ ನಾಪತ್ತೆ ಪ್ರಕರಣ ಸೇರಿದಂತೆ ವಿವಿಧ ಆರೋಪಗಳು ಸಿಸಿಬಿ ಪೊಲೀಸರ ವಿರುದ್ಧ ವ್ಯಕ್ತವಾಗಿತ್ತು. ಪೊಲೀಸರನ್ನು ಬಳಸಿ ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಹಣಕಾಸು ವ್ಯವಹಾರದ ಬಗ್ಗೆ ಕೂಲಂಕಷ ವಿಚಾರಣೆ ನಡೆಸಲು ಸಿದ್ಧತೆ ನಡೆಸಲಾ ಗಿದೆ. ಎಡಿಜಿಪಿ ಸೂಚನೆ ಮೇರೆಗೆ ನಗರ ಡಿಸಿಪಿ ವಿನಯ ಗಾಂವ್ಕರ್ ವಿಚಾರಣೆ ನಡೆಸಲಿದ್ದಾರೆ.
ಹಿಂದಿನ ಸಿಸಿಬಿ ಅಧಿಕಾರಿ ಈಗ ಬೇರೆ ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಅವರ ಅವಧಿಯಲ್ಲಿ ನಡೆದ ಹಣಕಾಸಿನ ವ್ಯವಹಾರಗಳ ಬಗ್ಗೆ ಅವರನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಅಧಿಕಾರಿಗೆ ಮಂಗಳೂರಿನಿಂದ ನ.18ರಂದು ವರ್ಗಾವಣೆಯಾಗಿದ್ದು, ವರ್ಗಾವಣೆಗೊಂಡ ಸ್ಥಳದಲ್ಲಿ ಡಿಸಿಐಬಿ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ದೀರ್ಘ ಅನಾರೋಗ್ಯ ಕಾರಣದಲ್ಲಿ ರಜೆಯಲ್ಲಿದ್ದರು.
ಇದೀಗ ಆರೋಪ ಹೊರಬೀಳುತ್ತಿದ್ದಂತೆ ಫೆ.3ರಂದು ದಿಢೀರನೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅದಕ್ಕೂ ಮೊದಲು ಮತ್ತೆ ವರ್ಗಾವಣೆ ರದ್ದುಪಡಿಸಿ ಮಂಗಳೂರು ಸಿಸಿಬಿಗೆ ಮರಳಲು ಎಲ್ಲ ರೀತಿಯ ಒತ್ತಡ ತಂತ್ರಗಳನ್ನು ಪ್ರಯೋಗಿಸಿದ್ದರು. ಆದರೆ ಅದು ವಿಫಲವಾದಾಗ ಹಾಗೂ ಹಣಕಾಸು ವಹಿವಾಟಿನ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡ ಜಾಗದಲ್ಲಿ ಕರ್ತವ್ಯಕ್ಕೆ ಸೇರಿದ್ದಾರೆ ಎಂದು ತಿಳಿದುಬಂದಿದೆ. ಈ ಅಧಿಕಾರಿಗೆ ಕಳೆದ ಬಾರಿಯ ಮುಖ್ಯಮಂತ್ರಿ ಪದಕ ಪ್ರಕಟವಾಗಿದ್ದು, ಇತ್ತೀಚೆಗೆ ಬೆಂಗಳೂರಿಗೆ ತೆರಳಿ ತಾಲೀಮಿನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗಿದೆ.
ಫೆ.8ರಂದು ಮುಖ್ಯಮಂತ್ರಿ ಪದಕ ಪ್ರದಾನ ನಡೆಯಲಿದ್ದು, ಆರೋಪಕ್ಕೆ ಒಳಗಾದ ಅಧಿಕಾರಿಗೆ ಮುಖ್ಯಮಂತ್ರಿ ಪದಕ ಪಡೆಯುವುದು ಸಾಧ್ಯವೇ ಎಂಬುದು ನಾಗರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಈ ಅಧಿಕಾರಿ ಸೇರಿದಂತೆ ಆರೋಪಕ್ಕೆ ಒಳಗಾದ ಹಿಂದಿನ ಸಿಸಿಬಿ ಸಿಬ್ಬಂದಿಗೆ ವಿಚಾರಣೆಗೆ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ.







