ಜ್ಯೋತಿಷಿಯ ಜಾಹೀರಾತು ನಂಬಿ ಲಕ್ಷಾಂತರ ರೂ. ಹಣ ಕಳೆದುಕೊಂಡ ವ್ಯಕ್ತಿ

ಬೆಂಗಳೂರು, ಫೆ.6: ಜಾಹೀರಾತು ನೋಡಿ ಜ್ಯೋತಿಷಿ ಬಳಿಗೆ ಹೋಗಿದ್ದ ಭದ್ರತಾ ಸಿಬ್ಬಂದಿ ಲಕ್ಷಾಂತರ ಹಣ ಕಳೆದುಕೊಂಡ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಲ್ಲಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬನಶಂಕರಿಯ ಸೆಕ್ಯೂರಿಟಿ ಗಾರ್ಡ್ ಅರುಣ್ ಗೌಡ ನೀಡಿದ ದೂರಿನ ಆಧಾರದ ಮೇರೆಗೆ ಕೇರಳ ಮೂಲದ ಜ್ಯೋತಿಷಿ ಗುರುನಾಥ್ ಭಟ್ ಹಾಗೂ ವಿನಾಯಕ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭದ್ರತಾ ಸಿಬ್ಬಂದಿ ಆಗಿರುವ ಅರುಣ್, ಸ್ವಂತ ಹೋಟೆಲ್ ತೆರೆಯಲು ಮುಂದಾಗಿದ್ದರು. ಉಚಿತವಾಗಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಇತ್ತೀಚೆಗೆ ಜ್ಯೋತಿಷ್ಯಾಲಯವೊಂದರ ಜಾಹೀರಾತನ್ನು ಗಮನಿಸಿ ಅದರಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿಯು ತಮ್ಮನ್ನು ಕೇರಳದ ಕುಂಬಕೋಣ ಆಶ್ರಮದಲ್ಲಿ ಜ್ಯೋತಿಷಿಯಾಗಿರುವ ಗುರುನಾಥ್ ಭಟ್ ಎಂದು ಪರಿಚಯಿಸಿಕೊಂಡಿದ್ದರು.
ನಂತರ ನಿನಗೆ ಸಮಸ್ಯೆಯಿದ್ದು, ಇದಕ್ಕೆ ಪರಿಹಾರ ಮಾಡಬೇಕಾಗುತ್ತದೆ. ಪರಿಹಾರ ಪೂಜೆಗೆ 20 ಸಾವಿರ ರೂ. ಖರ್ಚಾಗಲಿದೆ, ನನ್ನ ಶಿಷ್ಯ ವಿನಾಯಕ್‍ನನ್ನು ಬೆಂಗಳೂರಿಗೆ ಕಳಿಸುತ್ತೇನೆ. ಆತನ ಕೈಯಲ್ಲಿ ಹಣ ಕೊಟ್ಟು ಕಳಿಸುವಂತೆ ಗುರುನಾಥ್ ಸೂಚಿಸಿದ್ದರು. ಅದರಂತೆ ವಿನಾಯಕ್‍ಗೆ ಅರುಣ್ ಹಣ ಕೊಟ್ಟಿದ್ದಾರೆ ಎನ್ನಲಾಗಿದೆ.
ಆನಂತರ, ಮತ್ತೆ 60 ಸಾವಿರ ರೂ.ಗಳಿಗೆ ಬೇಡಿಕೆಯಿಟ್ಟು ಹಂತ ಹಂತವಾಗಿ ಒಟ್ಟು 1.04 ಲಕ್ಷ ರೂ.ವರೆಗೂ ವಸೂಲಿ ಮಾಡಿದ್ದು, ತದನಂತರ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.







