ಹಫ್ತಾ ವಸೂಲಿ ಆರೋಪ : ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ್ ಸೆರೆ

ಭಟ್ಕಳ : ನೇತ್ರಾಣಿ ಸ್ಕೂಬಾ ಡೈವಿಂಗ್ ಮಾಲಕನ ಬಳಿ ಹಫ್ತಾ ವಸೂಲಿ ಮಾಡಿದ ಆರೋಪದಡಿ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಮುರ್ಡೇಶ್ವರದ ನೇತ್ರಾಣಿ ಸ್ಕೂಬಾ ಡೈವಿಂಗ್ ಮಾಲಕ ಗಣೇಶ ಹರಿಕಾಂತ ನೀಡಿದ ದೂರಿನ ಅನ್ವಯ ಪೊಲೀಸರು ಕ್ರಮ ಜರಗಿಸಿದ್ದಾರೆ ಎಂದು ತಿಳಿದುಬಂದಿದೆ.
ದೂರುದಾರ ಗಣೇಶ ಹರಿಕಾಂತ ಜ. 2 ರಂದು ಮುರುಡೇಶ್ವರದ ಸಮುದ್ರ ತೀರದಲ್ಲಿರುವುದನ್ನು ಗಮನಿಸಿದ ಆರೋಪಿ ನೇರವಾಗಿ ದೂರುದಾರನ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಕೂಬಾ ಡೈವಿಂಗ್ ಹಾಗೂ ಉತ್ತರ ಕನ್ನಡ ಸಿರಿ ಉತ್ಪನ್ನಗಳ ಅಂಗಡಿಯನ್ನು ನಡೆಸಬೇಕಾದರೆ ತಿಂಗಳಿಗೆ ಹಫ್ತಾ ನೀಡಬೇಕೆಂದು ಬೆದರಿಕೆಯೊಡಿದ್ದಾನೆ, ಒಂದು ವೇಳೆ ಹಣ ನೀಡದಿದ್ದಲ್ಲಿ ಅಂಗಡಿ ಹಾಗೂ ಸ್ಕೂಬಾ ಡೈವಿಂಗ್ ಮುಚ್ಚಿಸುವುದಾಗಿ ಬೆದರಿಸಿ, ನಿನ್ನ ವಿರುದ್ದ ಜಿಲ್ಲಾಧಿಕಾರಿಗೆ, ಪೊಲೀಸ್ ಇಲಾಖೆಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಮುಚ್ಚಿಸುತ್ತೇನೆಂದು ಹೇಳಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಹಾಗೂ ಸ್ಕೂಬಾ ಡೈವಿಂಗ್ ತರಬೇತಿ ನೀಡುವ ತರಬೇತುದಾರರಿಗೂ ಜೀವ ಬೆದರಿಕೆ ಹಾಕಿದ ಕಾರಣ ಅವರು ಸಹ ಕೆಲಸಕ್ಕೆ ಬರುತ್ತಿಲ್ಲ, ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್ ಬಗ್ಗೆ ತಪ್ಪು ಮಾಹಿತಿ ನೀಡಿ ಪ್ರವಾಸಿಗರು ಸ್ಕೂಬಾ ಡೈವಿಂಗ್ ಬಾರದಂತೆ ಮಾಡಿ ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಆಗಿದೆ ಎಂದು ಗಣೇಶ ಹರಿಕಾಂತ ದೂರಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಆರೋಪಿ ಜಯಂತ ನಾಯ್ಕ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.





