ಕೊಂಕಣಿ ಕವಿ ಮಾವ್ರಿಸ್ ಕವಿತಾ ಪುರಸ್ಕಾರಕ್ಕೆ ಆಯ್ಕೆ

ಮಂಗಳೂರು, ಫೆ.6: ಕವಿತಾ ಟ್ರಸ್ಟ್ ನೀಡುವ 2020ನೇ ಸಾಲಿನ ಮಥಾಯಸ್ ಕುಟುಂಬ ಪ್ರಾಯೋಜಿತ ಕವಿತಾ ಪುರಸ್ಕಾರವು ಕವಿ ಮಾವ್ರಿಸ್ ಶಾಂತಿಪುರ ಅವರಿಗೆ ಲಭಿಸಿದೆ.
ಪುರಸ್ಕಾರವು 25 ಸಾವಿರ ರೂ. ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರ ಒಳಗೊಂಡಿದೆ. ಫೆ.20ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುವ ಕವಿತಾ ಫೆಸ್ಟ್ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು. ಕವಿ, ಸಂಘಟಕ ಟೈಟಸ್ ನೊರೊನ್ಹಾ ಅಧ್ಯಕ್ಷರಾಗಿ ಮತ್ತು ಹಿರಿಯ ಕೊಂಕಣಿ ಮುಂದಾಳು ಬಸ್ತಿ ವಾಮನ್ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
‘ಕಿರಾ ಬೋಂಚ್’ ಮತ್ತು ‘ಭಿಂಗಾರಿ’ ಕವನ ಸಂಕಲನಗಳನ್ನು ಪ್ರಕಟಿಸಿದ ಮಾವ್ರಿಸ್ ಮುನ್ನೂರಕ್ಕೂ ಮಿಕ್ಕಿ ಕವಿತೆಗಳನ್ನು ರಚಿಸಿದ್ದಾರೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಗಾಗಿ ‘ಆಬೊಲಿಂ’ ಕವಿತಾ ಸಂಗ್ರಹವನ್ನು ಸಂಪಾದಿಸಿದ್ದಾರೆ. ಕೊಂಕಣಿ ಪತ್ರಿಕೆಗಳಾದ ‘ಆಮ್ಚಿ ಯುವಕ್’, ‘ಉಮಾಳೊ’ ಮತ್ತು ‘ಕಾಣಿಕ್’ ಪತ್ರಿಕೆಗಳ ಸಂಪಾದಕರಾಗಿ ಹಾಗೂ ‘ರಾಕ್ಣೊ’ ಸಹ ಸಂಪಾದಕರಾಗಿ ದುಡಿದ ಅವರು, ಹಲವು ಯುವ ಕವಿಗಳಿಗೆ ಪ್ರೇರಣೆಯಾಗಿದ್ದಾರೆ. ಕವಿತೆ ಬರೆಯುವ ಬಗ್ಗೆ ಕಾರ್ಯಾಗಾರಗಳನ್ನು, ಕವಿಗೋಷ್ಠಿಗಳನ್ನು ಆಯೋಜಿಸಿದ್ದಾರೆ. ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಕೊಂಕಣಿ ಕವಿತೆಯನ್ನು ಪ್ರತಿನಿಧಿಸಿದ್ದಾರೆ.
ಕೊಂಕಣಿ ಲೇಖಕರ ಒಕ್ಕೂಟದ ಅಧ್ಯಕ್ಷರಾಗಿ, ಸಾಹಿತ್ಯ ಅಕಾಡಮಿ ಡೆಲ್ಲಿ, ಕೊಂಕಣಿ ಭಾಷಾ ಮಂಡಳ ಮತ್ತು ಕೊಂಕಣಿ ಸಾಹಿತ್ಯ ಪರಿಷದ್ ಸಮಿತಿಗಳಲ್ಲಿ ಸದಸ್ಯರಾಗಿ ದುಡಿದಿದ್ದಾರೆ. ಅಂತರ್ಜಾಲದಲ್ಲಿ ಕೊಂಕಣಿ ಸುಗಂಧ ಪಸರಿಸಲು ಕಾಣಿಕ್ ಆನ್‌ಲೈನ್ ಡಾಟ್ ಕಾಮ್ ಮತ್ತು ಗ್ಲೋಬಲ್ ರೇಡಿಯೊ ಆರಂಭಿಸಿದ್ದರು.
ಅವರ ‘ಕಿರಾ ಬೋಂಚ್’ ಕೃತಿಗೆ ದಿ. ಲುವಿಸ್ ಮಸ್ಕರೇನ್ಹಸ್ ಜನ್ಮ ಶತಾಬ್ದಿ ಪುರಸ್ಕಾರ ಮತ್ತು ಕೊಂಕಣಿ ಭಾಷಾ ಮಂಡಳ, ಗೋವಾದ ಪುರಸ್ಕಾರಗಳು ಲಭಿಸಿವೆ. ಸಾಹಿತಿಗಳಿಗೆ ಲಭಿಸುವ ಕೊಂಕಣಿ ಕುಟಮ್, ಬಾಹ್ರೇನ್ ಪುರಸ್ಕಾರವು ಪ್ರಥಮವಾಗಿ ಅವರಿಗೆ ಲಭಿಸಿತ್ತು.
ಮಥಾಯಸ್ ಕುಟುಂಬ ಪುರಸ್ಕಾರ: ದುಬೈನ ಮೆರಿಟ್ ಫ್ರೈಟ್ ಸಿಸ್ಟಮ್ಸ್‌ನ ಆಡಳಿತ ನಿರ್ದೇಶಕ ಜೋಸೆಫ್ ಮಥಾಯಸ್ ತಮ್ಮ ಕುಟುಂಬದ ಹೆಸರಲ್ಲಿ ಕೊಡಮಾಡುವ ಈ ಪುರಸ್ಕಾರವು ಇದುವರೆಗೆ 12 ಕವಿಗಳಿಗೆ ಲಭಿಸಿದೆ. ಇದೇ ಸಂದರ್ಭದಲ್ಲಿ ವಿಮರ್ಶಕ ಎಚ್ಚೆಮ್ ಪೆರ್ನಾಲ್ ಅವರ ‘ಕೊಂಕ್ಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ’ ಪುಸ್ತಕ ಲೊಕಾರ್ಪಣೆಗೊಳ್ಳಲಿದೆ. ನೆಲ್ಸನ್ ಮತ್ತು ಲವೀನಾ ರೊಡ್ರಿಕ್ಸ್- ಚಾಫ್ರಾ ಡಿಕೊಸ್ತಾ ಸ್ಮಾರಕ ಕೊಂಕಣಿ ಕವಿತಾ ಪ್ರಸ್ತುತಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.







