ಸರಕಾರಿ ಜಮೀನಿನ ಅಕ್ರಮ ಸಕ್ರಮ ವ್ಯಕ್ತಿಯ ಹಕ್ಕಾಗದು: ಸುಪ್ರೀಂಕೋರ್ಟ್

ಹೊಸದಿಲ್ಲಿ, ಫೆ.6: ಸರಕಾರದ ಅಥವಾ ಪಂಚಾಯತ್‌ಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ನೆಲೆಸಿದ್ದವರು ಆ ಜಮೀನನ್ನು ಸಕ್ರಮಗೊಳಿಸುವುದು ತಮ್ಮ ಹಕ್ಕು ಎಂದು ಭಾವಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸರಕಾರಿ ಜಮೀನಿನ ಅಕ್ರಮ ಸಕ್ರಮ ಆಯಾ ರಾಜ್ಯ ಸರಕಾರಗಳ ಕಾರ್ಯನೀತಿ ಅಥವಾ ಆಯಾ ರಾಜ್ಯಗಳ ನಿಯಮದಲ್ಲಿ ಉಲ್ಲೇಖಿಸಿರುವ ಷರತ್ತುಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಧೀಶರಾದ ಡಿವೈ ಚಂದ್ರಚೂಡ್ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ ಹೇಳಿದೆ.
ಗ್ರಾಮಪಂಚಾಯತ್‌ಗೆ ಸೇರಿದ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಅಲ್ಲಿ ಮನೆಯನ್ನು ಕಟ್ಟಿದ್ದ ಹರ್ಯಾನದ ಸೋನೆಪತ್ ಜಿಲ್ಲೆಯ ಸರ್ಸಾದ್ ಗ್ರಾಮದ ನಿವಾಸಿ ಬಳಿಕ ಈ ಸ್ಥಳವನ್ನು ಅಕ್ರಮ ಸಕ್ರಮ ಯೋಜನೆಯಡಿ ಸಕ್ರಮಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಅಕ್ರಮ ಸಕ್ರಮಕ್ಕೆ ಸಂಬಂಧಿಸಿದ ನಿಯಮಕ್ಕೆ ಹರ್ಯಾನ ಸರಕಾರ ತಿದ್ದುಪಡಿ ಮಾಡಿ 2008ರಲ್ಲಿ ಅಧಿಸೂಚನೆ ಹೊರಡಿಸಿದ್ದು, ಈ ಪ್ರಕಾರ, ಫಲಾನುಭವಿಗಳು ಗರಿಷ್ಟ 200 ಚದರಡಿ ಸ್ವಾಧೀನಗೊಳಿಸಬಹುದು.
ಆದರೆ ಈ ನಿಯಮವನ್ನು ಅರ್ಜಿದಾರರು ಉಲ್ಲಂಘಿಸಿದ್ದರಿಂದ ಅಕ್ರಮ ಸಕ್ರಮ ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯೂ ತಿರಸ್ಕೃತವಾಗಿತ್ತು. ಅಂತಿಮವಾಗಿ ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಸರಕಾರಿ ಜಮೀನಿನ ಅಕ್ರಮ ಸ್ವಾಧೀನ ಹೊಂದಿದವರು ಸಕ್ರಮಗೊಳಿಸುವುದು ತಮ್ಮ ಹಕ್ಕು ಎಂದು ವಾದಿಸುವಂತಿಲ್ಲ ಎಂದು ತೀರ್ಪು ನೀಡಿದೆ.







