ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಗೊಳಿಸಿದ ರಾಷ್ಟ್ರಪತಿ ಕೋವಿಂದ್

ಮಡಿಕೇರಿ, ಫೆ.6: ದೇಶದ ಅಪ್ರತಿಮ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ವಸ್ತು ಸಂಗ್ರಹಾಲಯ(ಮ್ಯೂಸಿಯಂ)ನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಲೋಕಾರ್ಪಣೆ ಮಾಡಿದರು.
ತಿಮ್ಮಯ್ಯ ಅವರು ಹುಟ್ಟಿ ಬೆಳೆದ ನಿವಾಸವಾದ ನಗರದ ಜನರಲ್ ತಿಮ್ಮಯ್ಯ ರಸ್ತೆಯ ‘ಸನ್ನಿಸೈಡ್’ನಲ್ಲಿ ಮ್ಯೂಸಿಯಂನ್ನು ರಾಷ್ಟ್ರಪತಿ ಉದ್ಘಾಟಿಸಿದರು.
ಶನಿವಾರ ಮಧ್ಯಾಹ್ನ ಭಾಗಮಂಡಲದಿಂದ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ನಲ್ಲಿ ನಗರದ ಹೆಲಿಪ್ಯಾಡ್‍ಗೆ ಬಂದಿಳಿದ ರಾಷ್ಟ್ರಪತಿಯನ್ನು ಸರಕಾರದ ಪರವಾಗಿ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರು ಆತ್ಮೀಯವಾಗಿ ಬರ ಮಾಡಿಕೊಂಡರು.
ಈ ಸಂದರ್ಭ ದಕ್ಷಿಣ ವಲಯ ಐಜಿ ಪ್ರವೀಣ ಮಧುಕರ ಪವಾರ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೋಲಿಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಇತರ ಗಣ್ಯರು ಹಾಜರಿದ್ದರು.
ಬಳಿಕ ನಗರದ ಹೊರವಲಯದ ರೆಸಾರ್ಟ್ ಗೆ ಭೋಜನ ಹಾಗೂ ವಿಶ್ರಾಂತಿಗಾಗಿ ತೆರಳಿದ ರಾಷ್ಟಪತಿಯವರು ಅಪರಾಹ್ನ 3 ಗಂಟೆಗೆ ಜನರಲ್ ತಿಮ್ಮಯ್ಯ ವಸ್ತುಸಂಗ್ರಹಾಲಯಕ್ಕೆ ಆಗಮಿಸಿದರು. ವಸ್ತು ಸಂಗ್ರಹಾಲಯ ಆವರಣದಲ್ಲಿರುವ ಯುದ್ಧ ಟ್ಯಾಂಕ್, ಯುದ್ಧ ವಿಮಾನ ವೀಕ್ಷಿಸಿದ ಅವರು ನಂತರ ಯುದ್ಧ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.
ಬಳಿಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವೀರ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು.
ರಾಷ್ಟ್ರಪತಿ ಅವರ ಪತ್ನಿ ಸವಿತಾ ಕೋವಿಂದ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್, ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ಸಂಚಾಲಕ ನಿವೃತ್ತ ಮೇಜರ್ ಬಿದ್ದಂಡ ನಂಜಪ್ಪ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಇತರರು ಇದ್ದರು.
ಯುವ ಜನತೆಗೆ ಪ್ರೇರಕ ಶಕ್ತಿ ಜನರಲ್ ತಿಮ್ಮಯ್ಯ ಮ್ಯೂಸಿಯಂ
ಪ್ರಕೃತಿಯ ಬೀಡು-ಸೈನಿಕರ ನಾಡೇ ಆಗಿರುವ ಕೊಡಗು ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ತಲೆ ಎತ್ತಿರುವ ವೀರ ಸೇನಾನಿ ಜ.ಕೆ.ಎಸ್. ತಿಮ್ಮಯ್ಯ ಅವರ ಮ್ಯೂಸಿಯಂ ಯುವ ಸಮೂಹಕ್ಕೆ ನಾಡಿನ ಸೈನಿಕ ಪರಂಪರೆಯನ್ನು ಮುನ್ನಡೆಸುವ ಪ್ರೇರಕ ಶಕ್ತಿಯಾಗಲಿದೆ.
ಜನರಲ್ ತಿಮ್ಮಯ್ಯ ಅವರು 1906 ಮಾರ್ಚ್ 31 ರಂದು ಸನ್ನಿಸೈಡ್ ಬಂಗಲೆಯನ್ನು ಯಥಾ ಸ್ಥಿತಿಯಲ್ಲಿ ನವೀಕರಣಗೊಳಿಸುವ ಮೂಲಕ ಅದನ್ನೆ ಮ್ಯೂಸಿಯಂ ಆಗಿ ಪರಿವರ್ತಿಸಿರುವುದು ವಿಶೇಷ. ಈ ಮನೆಯಲ್ಲೆ ತಿಮ್ಮಯ್ಯ ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಎನ್ನುವುದೇ, ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಲ್ಲೂ ವಿಶೇಷ ಅನುಭೂತಿಯನ್ನು ನೀಡುತ್ತದೆ.
ಮ್ಯೂಸಿಯಂನ ಆವರಣದಲ್ಲಿ 1947ರ ಬಳಿಕ ರಾಷ್ಟ್ರ ರಕ್ಷಣೆಗೆ ಬಲಿದಾನ ಗೈದ ಯೋಧರ ಸ್ಮರಣಾರ್ಥ ಸಜ್ಜುಗೊಳಿಸಿರುವ ‘ಯುದ್ಧ ಸ್ಮಾರಕ’ ಕಣ್ಮನ ಸೆಳೆಯುತ್ತದಾದರೆ, ರಷ್ಯಾ ನಿರ್ಮಿತ ಭಾರತೀಯ ಸೇನೆಯ ಹಲವಾರು ಯುದ್ಧಗಳಲ್ಲಿ ಬಳಸಲಾಗಿದ್ದ ‘ಹಿಮ್ಮತ್’ ಹೆಸರಿನ ಟಿ.50 ಯುದ್ಧ ಟ್ಯಾಂಕರ್, ‘ಮಿಗ್-20’ ಯುದ್ಧ ವಿಮಾನ ಗಮನ ಸೆಳೆಯುತ್ತದೆ.
ಮ್ಯೂಸಿಯಂನಲ್ಲಿ ಜನರಲ್ ತಿಮ್ಮಯ್ಯ ಅವರ ಬಾಲ್ಯ, ಸೇನಾ ಕ್ಷೇತ್ರದಲ್ಲಿನ ವಿವಿಧ ಛಾಯಾಚಿತ್ರಗಳು ಆಕರ್ಷಿಸುತ್ತವೆ. ಜನರಲ್ ತಿಮ್ಮಯ್ಯ ಅವರ ಬದುಕು, ಭಾರತೀಯ ಸೇನೆಯ ಇತಿಹಾಸವನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ.
ಭಾರತೀಯ ಸೇನಾಧಿಕಾರಿಯಾಗಿ ಜನರಲ್ ತಿಮ್ಮಯ್ಯ ಅವರು ನಡೆದು ಬಂದ ದಾರಿಯ ಇತಿಹಾಸ ಸಾರುವುದರ ಜೊತೆಗೆ ಭಾರತೀಯ ಸೇನಾ ಪರಂಪರೆಯ ಮಾಹಿತಿ ನೀಡುವ ಮಹತ್ವದ ಸಂದೇಶ ವಸ್ತುಸಂಗ್ರಹಾಲಯದಲ್ಲಿದೆ. ವಸ್ತು ಸಂಗ್ರಹಾಲಯದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಬಂದೂಕುಗಳು ಗಮನ ಸೆಳೆಯುತ್ತವೆ. ತಿಮ್ಮಯ್ಯ ಅವರು ಸೇನಾಧಿಕಾರಿಯಾಗಿ ಸಲ್ಲಿಸಿದ ಸೇವೆಯ ಛಾಯಾಚಿತ್ರಗಳಿದ್ದು, ವಸ್ತು ಸಂಗ್ರಹಾಲಯದ ಪ್ರತೀ ಕೊಠಡಿಯು ಸೈನಿಕರ ಕತೆ ಹೇಳುತ್ತದೆ.
ಜನರಲ್ ತಿಮ್ಮಯ್ಯ ಅವರ ಬಗ್ಗೆ ಬರೆದ ರಾಷ್ಟ್ರಪತಿ
‘ಜನರಲ್ ತಿಮ್ಮಯ್ಯ ಮ್ಯೂಸಿಯಂ’ ಜ.ತಿಮ್ಮಯ್ಯ ಅವರಂತಹ ವೀರ ಪರಂಪರೆಯನ್ನು ಮುನ್ನಡೆಸಲು ಯುವ ಸಮೂಹಕ್ಕೆ ಪ್ರೇರಕ ಶಕ್ತಿಯಾಗಿದೆ.
ಹೀಗೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿಯ ಕುರುಹಾಗಿ ದಾಖಲೆಯ ಪುಸ್ತಕದಲ್ಲಿ ತಮ್ಮ ಲೇಖನಿಯಿಂದ ಬರೆದಿದ್ದಾರೆ.
ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟಿಸಿದ ಬಳಿಕ ಲೇಖನಿ ಮೂಲಕ ಅಭಿಪ್ರಾಯ ಹಂಚಿಕೊಂಡ ರಾಷ್ಟ್ರಪತಿಗಳು ಜನರಲ್ ತಿಮ್ಮಯ್ಯ ಮ್ಯೂಸಿಯಂ ಸೈನಿಕ ಪರಂಪರೆಯ ವೀರಯೋಧರೊಬ್ಬರು ಸೈನ್ಯಕ್ಕೆ ನೀಡಿದ ಅತ್ಯಪೂರ್ವ ಕೊಡುಗೆಯನ್ನು ಸಂರಕ್ಷಿಸಿದೆ ಎಂದು ತಿಳಿಸಿದ್ದಾರೆ. ಮಹಾನ್ ಸೇನಾನಿ ಜ.ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಸನ್ನಿ ಸೈಡ್ ಮನೆ ಅತ್ಯಂತ ಸ್ಮರಣೀಯವಾದುದೆಂದು ಅಭಿಪ್ರಾಯಪಟ್ಟಿದ್ದಾರೆ.
ಜನರಲ್ ಕೆ.ಎಸ್.ತಿಮ್ಮಯ್ಯ ಹಾಗೂ ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರಂತಹ ವೀರ ಸೇನಾನಿಗಳನ್ನು ನೀಡಿರುವ ಹೆಮ್ಮಯ ನಾಡು ಕೊಡಗು ಎಂದು ಮುಕ್ತವಾಗಿ ತಿಳಿಸಿರುವ ರಾಷ್ಟ್ರಪತಿಗಳು, ಮ್ಯೂಸಿಯಂ ಸೈನಿಕ ಪರಂಪರೆಯನ್ನು ಮುಂದುವರಿಸುವ ಪ್ರೇರಕ ಶಕ್ತಿಯಾಗಿದೆ ಎಂದು ಬರವಣಿಗೆ ಮೂಲಕ ಹೇಳಿಕೊಂಡಿದ್ದಾರೆ.








