ಜನರ ಬೇಡಿಕೆಗೆ ತಕ್ಕಂತೆ ಯೋಜನೆ ರೂಪಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

ಬೆಂಗಳೂರು, ಫೆ. 6: ರಾಜ್ಯದಲ್ಲಿ ಜನರಿಂದ ಜನರಿಗಾಗಿ ಜನರಿಗೋಸ್ಕರ ಯೋಜನೆಗಳನ್ನು 2021-22ನೆ ಸಾಲಿನಿಂದ ಜಾರಿಗೆ ತರಲು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಏರ್ಪಡಿಸಿದ್ದ ಕನಾಟಕ ರಾಜ್ಯ ವೀಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಇಂದು ಸಭೆ ನಡೆದಿದ್ದು, ಇನ್ನು ಮುಂದೆ ವರ್ಷಕ್ಕೆರಡು ಬಾರಿ ಸಭೆ ಏರ್ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವೀಕೇಂದ್ರಕರಣ ಯೋಜನಾ ಪ್ರಕ್ರಿಯೆಯ ಬಲವರ್ಧನಗೆ ಸರಕಾರವು 2019ರಲ್ಲೇ ವಿವರವಾದ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದನ್ನು ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಪಾಲಿಸಬೇಕು ಎಂದು ಯಡಿಯೂರಪ್ಪ ಸೂಚಿಸಿದರು.
ಜನರ ಬೇಡಿಕೆಗೆ ತಕ್ಕಂತೆ ಸರಕಾರದ ಯೋಜನೆ ರೂಪಿಸಲು ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆ ಹಂತದಿಂದ, ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ವರೆಗಿನ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದರು.
ಸಭೆಯಲ್ಲಿ ಸಮಿತಿಯ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ತಹಶೀಲ್ದಾರರನ್ನು ಸದಸ್ಯರನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಉಳಿದ ಸಲಹೆಗಳನ್ನು ರಾಜ್ಯದ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್, ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಹಾಗೂ ಸಮಿತಿಯ ಸದಸ್ಯರು, ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿ ಉಮಾ ಮಹಾದೇವನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
.jpg)







