ಕೃಷಿ ಕಾಯ್ದೆಗಳು 'ಅದಾನಿ-ಅಂಬಾನಿ ಹಿತರಕ್ಷಣ್ ಯೋಜನಾ': ಕಾಂಗ್ರೆಸ್ ಟೀಕೆ

ಬೆಂಗಳೂರು, ಫೆ.6: ಕೃಷಿ ಕಾಯ್ದೆಗಳು ‘ಪ್ರಧಾನ್ ಮಂತ್ರಿ ಅದಾನಿ-ಅಂಬಾನಿ ಹಿತರಕ್ಷಣ್ ಯೋಜನಾ’ ಎನ್ನುವುದಕ್ಕೆ ರಾಜ್ಯ ಬಿಜೆಪಿ ಸಾಕ್ಷಿ ಕೊಡುತ್ತಿದೆ. ಅದಾನಿ, ಅಂಬಾನಿ ಪರ ಬಿಜೆಪಿ ಬ್ಯಾಟ್ ಮಾಡುತ್ತಿರುವುದೇಕೆ? ‘ಬಿಜೆಪಿ ರೈತರಿಗೆ ಶತ್ರು, ಕಂಪೆನಿಗಳಿಗೆ ಮಿತ್ರ’ ಅದಕ್ಕೆ ಸಾಕ್ಷಿ ಇಲ್ಲಿದೆ ಎಂದು ಕಾಂಗ್ರೆಸ್ ಟ್ವೀಟರ್ ನಲ್ಲಿ ತಿರುಗೇಟು ನೀಡಿದೆ.
ಹೋರಾಟ ನಿರತ ರೈತರನ್ನು ಜಲಫಿರಂಗಿ, ಅಶ್ರುವಾಯು, ಲಾಠಿ, ತಂತಿಬೇಲಿ, ಮೊಳೆಗಳ ಸಾಲುಗಳು ವಿಚಲಿತಗೊಳಿಸಲಿಲ್ಲ, ಏಕೆಂದರೆ ಕರಾಳ ಕೃಷಿ ಕಾಯಿದೆಗಳು ಇವೆಲ್ಲಕ್ಕಿಂತ ಘೋರವಾಗಿವೆ, ರಾಜ್ಯ ಬಿಜೆಪಿ ಸರಕಾರ ಬಂಡವಾಳಶಾಹಿಗಳ ಹಿತಕ್ಕಾಗಿ ದೇಶದ ಅನ್ನದಾತರ ವಿರುದ್ಧ ಯುದ್ಧ ಸಾರಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಮಾರಕ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯನ್ನು ಕುಗ್ಗಿಸಲು ಬಿಜೆಪಿ ನಡೆಸಿದ ಪ್ರಯತ್ನಗಳು ರಸ್ತೆ ಅಗೆತ, ಖಲಿಸ್ತಾನಿಗಳು, ಜಲಫಿರಂಗಿ, ಅಶ್ರುವಾಯು, ಧ್ವಜ ಪಿತೂರಿ, ರಸ್ತೆಗೆ ಮೊಳೆ, ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ, ಅಪಪ್ರಚಾರ ನಡೆಯದು ರಾಜ್ಯ ಬಿಜೆಪಿ. ನಾಡು ರೈತರೊಂದಿಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಕರ್ನಾಟಕದಾದ್ಯಂತ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದಾರೆ. ಲಜ್ಜೆಗೆಟ್ಟ ರಾಜ್ಯ ಬಿಜೆಪಿ ಸರಕಾರ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಖಲಿಸ್ತಾನಿಗಳು ಎನ್ನುತ್ತಾ ಪ್ರಪೊಗಂಡಾ ಮಾಡುತ್ತಿರುವ ಬಿಜೆಪಿ, ಕರ್ನಾಟಕದ ರೈತರನ್ನೂ ಖಲಿಸ್ತಾನಿಗಳು, ದೇಶದ್ರೋಹಿಗಳು ಎನ್ನಲು ಹೇಸುವುದಿಲ್ಲ. ಬಿಜೆಪಿ ಬ್ರಿಟಿಷರಿಗಿಂತಲೂ ಕ್ರೂರ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಜಿಎಸ್‍ಟಿ ಪಾಲನ್ನು ಸಾಲ ಪಡೆಯುವ ಸಲಹೆಯ ಹೊರತಾಗಿಯೂ 1500 ಕೋಟಿ ರೂ.ಖೋತಾ. ಕರ್ನಾಟಕದ ಆರ್ಥಿಕತೆಗೆ ಮೊಳೆ ಹೊಡೆದಿದ್ದಾರೆ ನರೇಂದ್ರ ಮೋದಿ. ಅಲ್ಲದೆ, ಬಸನಗೌಡ ಪಾಟೀಲ್ ಯತ್ನಾಳ್, ವಿ.ಸುನೀಲ್ ಕುಮಾರ್ ಸೇರಿದಂತೆ ನಿಮ್ಮ ಶಾಸಕರೆ ಸಿಎಂ ಕರೆದ ಔತಣಕೂಟಕ್ಕೆ ಗೈರಾಗಿದ್ದಾರೆ, ಯಡಿಯೂರಪ್ಪ ಮತ್ತು ನಿಮ್ಮ ಪಕ್ಷಕ್ಕೆ ಮೊಳೆ ಹೊಡೆಯಲು ತಯಾರಾಗಿದ್ದಾರೆ. ರಾಜ್ಯ ಬಿಜೆಪಿ ಹುಷಾರಾಗಿರಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.







