ಎಚ್‌ಎಎಲ್-ಅಮೆರಿಕ ಮೂಲದ ಲಾಕ್‌ಹೀಡ್ ಮಾರ್ಟಿನ್ ಒಪ್ಪಂದ

ಹೊಸದಿಲ್ಲಿ, ಫೆ. 6: ಭಾರತದ ವೈಮಾನಿಕ ಕ್ಷೇತ್ರದಲ್ಲಿ ಪ್ರಮುಖ ಉದ್ಯಮ ಸಹಯೋಗದ ಸಾಧ್ಯತೆ ಅನ್ವೇಷಿಸಲು ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ (ಎಚ್‌ಎಎಲ್)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಮೆರಿಕದ ರಕ್ಷಣಾ ಕ್ಷೇತ್ರದ ಪ್ರಮುಖ ಸಂಸ್ಥೆ ಲಾಕ್‌ಹೀಡ್ ಮಾರ್ಟಿನ್ ಶುಕ್ರವಾರ ಹೇಳಿದೆ.
ಇದು ಭಾರತೀಯ ಉದ್ಯಮದೊಂದಿಗೆ ತನ್ನ ಬಾಂಧವ್ಯವನ್ನು ಬಲಪಡಿಸುತ್ತದೆ ಹಾಗೂ ಕಂಪೆನಿಯ ಜಾಗತಿಕ ವೈಮಾನಿಕ, ರಕ್ಷಣಾ ಪರಿಸರ ವ್ಯವಸ್ಥೆಯನ್ನು ಸಂಯೋಜಿಸುವತ್ತ ಕಾರ್ಯ ನಿರ್ವಹಿಸುತ್ತದೆ ಎಂದು ಲಾಕ್‌ಹೀಡ್ ಮಾರ್ಟಿನ್ ಹೇಳಿದೆ. ‘‘ಏಶ್ಯಾದ ಅತಿ ದೊಡ್ಡ ವೈಮಾನಿಕ ಕಂಪೆನಿಗಳಲ್ಲಿ ಒಂದಾದ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್‌ಎಎಲ್) ನೊಂದಿಗೆ ಪ್ರಮುಖ ಅವಕಾಶವನ್ನು ಅನ್ವೇಷಿಸುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ’’ ಎಂದು ಲಾಕ್‌ಹೀಡ್ ಮಾರ್ಟಿನ್ ಏರೋನಾಟಿಕ್ಸ್-ಇಂಟಗ್ರೇಟೆಡ್ ಫೈಟರ್ ಗ್ರೂಪ್‌ನ ವ್ಯವಹಾರ ಅಭಿವೃದ್ಧಿಯ ಉಪಾಧ್ಯಕ್ಷ ಜೆ.ಆರ್. ಮೆಕ್‌ಡೊನಾಲ್ಡ್ ಹೇಳಿದ್ದಾರೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವಕಾಶವನ್ನು ಅನ್ವೇಷಿಸಲು ಲಾಕ್‌ಹೀಡ್ ಮಾರ್ಟಿನ್‌ನೊಂದಿಗೆ ಕಾರ್ಯ ನಿರ್ವಹಿಸಲು ಎಚ್‌ಎಎಲ್ ಎದುರು ನೋಡುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಆರ್. ಮಾಧವನ್ ಹೇಳಿದ್ದಾರೆ. ‘ಮೇಕ್ ಇನ್ ಇಂಡಿಯಾ’, ‘ಆತ್ಮ ನಿರ್ಭರ ಭಾರತ’, ‘ಸ್ಟಾರ್ಟ್ ಅಪ್ ಇಂಡಿಯಾ’ ಉಪಕ್ರಮಗಳು ಹಾಗೂ ಭಾರತದ ವೈಮಾನಿಕ ಶಕ್ತಿ ಯೋಜನೆಯನ್ನು ಬೆಂಬಲಿಸಲು ಉದ್ಯೋಗ ಹಾಗೂ ಆರ್ಥಿಕ ಸೌಲಭ್ಯ ಹೆಚ್ಚಿಸಲು ಭಾರತೀಯ ಕೈಗಾರಿಕೆಯೊಂದಿಗೆ ತನ್ನ ಬಾಂಧವ್ಯವನ್ನು ಲಾಕ್‌ಹೀಡ್ ಮಾರ್ಟಿನ್ ಸಬಲಗೊಳಿಸಲಿದೆ ಹಾಗೂ ಬೆಳಸಲಿದೆ ಎಂದು ಕಂಪೆನಿ ಹೇಳಿಕೆ ತಿಳಿಸಿದೆ. ಭಾರತೀಯ ವಾಯು ಪಡೆಗೆ 114 ಫೈಟರ್ ಜೆಟ್‌ಗಳನ್ನು ಪೂರೈಸುವ ಮೆಗಾ ಒಪ್ಪಂದದ ಸ್ಪರ್ಧೆಯಲ್ಲಿ ಕಂಪೆನಿ ಪ್ರಮುಖ ಸ್ಪರ್ಧಿಗಳಲ್ಲಿ ಒಂದಾಗಿದೆ.





