ಫ್ಯಾಶಿಸ್ಟರಿಗೆ ಪ್ರತ್ಯುತ್ತರ ನೀಡುವ ಪ್ರಬಲ ವೇದಿಕೆ ಅಗತ್ಯ : ಜಿಗ್ನೇಶ್ ಮೇವಾನಿ

ಭಟ್ಕಳ : ಫ್ಯಾಶಿಸ್ಟ್ ವಾದಿಗಳ ಸುಳ್ಳಿನ ಅಜೆಂಡಾಗಳಿಗೆ ಪ್ರತ್ಯುತ್ತರ ನೀಡುವ ಒಂದು ಪ್ರಬಲ ವೇದಿಕೆ ಇಂದು ದೇಶಕ್ಕೆ ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನ ಮಾಸ್ ಮೀಡಿಯಾ ಫೌಂಡೇಶನ್ ಕಾರ್ಯಪ್ರವೃತ್ತಗೊಂಡಿದೆ ಎಂದು ಗುಜರಾತ್ ಶಾಸಕ ಹಾಗೂ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಮಾಸ್ ಮೀಡಿಯಾ ಫೌಂಡೇಶನ್ ವತಿಯಿಂದ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಹಾನಿಯಾಗುತ್ತಿರುವುದು ಕೆಟ್ಟಜನರಿಂದಲ್ಲ ಬದಲಾಗಿ ಒಳ್ಳೆಯವರ ಮೌನದಿಂದಾಗಿದೆ ದೇಶದಲ್ಲಿ ದಲಿತ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೂಡ ಹೆಚ್ಚು ದೌರ್ಜನ್ಯಕ್ಕೊಳಗಾದವರಲ್ಲಿ ಅವರ ಸಂಖ್ಯೆಯೇ ಹೆಚ್ಚಾಗಿದೆ. ಏಕೆಂದರೆ ನಾವು ಮೌನವಾಗಿದ್ದೇವೆ. ಕಾಲ ಇನ್ನೂ ಮಿಂಚಿಲ್ಲ. ನಾವು ಎಚ್ಚೆತ್ತುಕೊಳ್ಳದಿದ್ದರೆ ಕಾಲ ನಮ್ಮಿಂದ ಮೀರಿ ಹೋಗುತ್ತದೆ ಎಂದರು.
ಐಎಎಸ್ ಮಾಜಿ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ನಮ್ಮ ಹಿರಿಯರು ಬಾಳಿ ಬದುಕಿದ ಸೌಹಾರ್ದ ಭಾರತದ ಸೌಂದರ್ಯವನ್ನು ಅದರ ಸ್ಫೂರ್ತಿಯನ್ನು ಹಾಳು ಮಾಡುತ್ತಿರುವ ಒಂದು ವರ್ಗ ನಮ್ಮ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದೆ ಎಂದರು
ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕ ಡಾ. ವಾಸು, ಮಾಸ್ ಮೀಡಿಯಾ ಫೌಂಡೇಶನ್‌ನ ಯೋಜನೆಯನ್ನು ವಿವರಿಸಿ ಹೊಸ ಮುಖ್ಯವಾಹಿನಿ ಮಾಧ್ಯಮದ ರೂಪುರೇಶಗಳನ್ನು ವಿವರಿಸಿದರು.
ತಂಝೀಮ್ ಅಧ್ಯಕ್ಷ ಎಸ್.ಎಮ್.ಸೈಯದ್ ಪರ್ವೇಝ್ ಕಾಯರ್ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಾಸ್ ಮೀಡಿಯಾ ಫೌಂಡೇಶನ್ ಕಾರ್ಯದರ್ಶಿ ಉಮರ್ ಯು.ಎಚ್., ಅಕ್ಬರ್ ಅಲಿ ಉಡುಪಿ, ತಂಝಿಮ್ ಮುಖಂಡರಾದ ಇನಾಯತುಲ್ಲಾ ಶಾಬಂದ್ರಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ, ಪುರಸಭೆ ಅಧ್ಯಕ್ಷ ಪರ್ವೇಝ್ ಕಾಸಿಂಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









