ಎಚ್-1ಬಿ ವೀಸಾ ವಿತರಣೆ: ಟ್ರಂಪ್ ಬದಲಾವಣೆ ಜಾರಿಯಲ್ಲಿ ವಿಳಂಬ
ಬೈಡನ್ ಸರಕಾರ ಘೋಷಣೆ

ವಾಶಿಂಗ್ಟನ್, ಫೆ. 6: ಎಚ್-1ಬಿ ಉದ್ಯೋಗ ವೀಸಾ ವಿತರಣೆ ನೀತಿಗೆ ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರ ತಂದಿರುವ ಬದಲಾವಣೆಗಳ ಜಾರಿಯನ್ನು ಮುಂದೂಡುವುದಾಗಿ ಬೈಡನ್ ಸರಕಾರ ಘೋಷಿಸಿದೆ. ವೀಸಾ ಅರ್ಜಿಗಳ ನೋಂದಾವಣೆ ವ್ಯವಸ್ಥೆಗೆ ತಂದಿರುವ ಬದಲಾವಣೆಗಳಿಗೆ ಸುಧಾರಣೆ ತರಲು, ಪರೀಕ್ಷಿಸಲು ಹಾಗೂ ಜಾರಿಗೊಳಿಸಲು ವಲಸೆ ಇಲಾಖೆಗೆ ಹೆಚ್ಚಿನ ಸಮಯಾವಕಾಶ ನೀಡುವುದಕ್ಕಾಗಿ 2021 ಡಿಸೆಂಬರ್ 31ರವರೆಗೆ ಹಾಲಿ ಲಾಟರಿ ವ್ಯವಸ್ಥೆಯನ್ನೇ ಮುಂದುವರಿಸುವುದಾಗಿ ಅದು ಹೇಳಿದೆ.
ಎಚ್-1ಬಿ ವೀಸಾಗಳ ಫಲಾನುಭವಿಗಳನ್ನು ನಿರ್ಧರಿಸುವ ಸಾಂಪ್ರದಾಯಿಕ ಲಾಟರಿ ವ್ಯವಸ್ಥೆಯನ್ನು ನಿಲ್ಲಿಸುವುದಾಗಿ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಜನವರಿ 7ರಂದು ಘೋಷಿಸಿತ್ತು.
ಸಿದ್ಧಾಂತ ಅಥವಾ ತಂತ್ರಜ್ಞಾನದಲ್ಲಿ ಅತ್ಯುನ್ನತ ಕೌಶಲ ಹೊಂದಿರುವ ವಿದೇಶಿ ಉದ್ಯೋಗಿಗಳು ಅಮೆರಿಕದಲ್ಲಿ ಕೆಲಸ ಮಾಡುವುದಕ್ಕಾಗಿ ಅವರಿಗೆ ಎಚ್-1ಬಿ ವೀಸಾಗಳನ್ನು ನೀಡಲಾಗುತ್ತಿದೆ.
ಅಮೆರಿಕದ ಉದ್ಯೋಗಿಗಳ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ವೇತನ ಆಧಾರದಲ್ಲಿ ಎಚ್-1ಬಿ ವೀಸಾಗಳನ್ನು ವಿತರಿಸುವ ಬಗ್ಗೆ ಪರಿಶೀಲಿಸುವುದಾಗಿ ವಲಸೆ ಸೇವೆಗಳ ಇಲಾಖೆ ಹೇಳಿತ್ತು. ಈ ವಿಶೇಷ ಉದ್ಯೋಗ ವೀಸಾ ಕಾರ್ಯಕ್ರಮದ ಪ್ರಯೋಜನ ಅತ್ಯುನ್ನತ ಕೌಶಲ ಹೊಂದಿರುವ ವಿದೇಶೀಯರಿಗೆ ಸಿಗುವಂತೆ ಖಾತರಿಪಡಿಸುವುದಾಗಿ ಹೇಳಿತ್ತು.
ಭಾರತ ಮತ್ತು ಚೀನಾ ಮುಂತಾದ ದೇಶಗಳ ಜನರು ಈ ವೀಸಾ ಕಾರ್ಯಕ್ರಮದ ಗರಿಷ್ಠ ಫಲಾನುಭವಿಗಳಾಗಿದ್ದಾರೆ.
ನೂತನ ಎಚ್-1ಬಿ ವೀಸಾ ವಿತರಣೆ ವ್ಯವಸ್ಥೆಗೆ ತಂದಿರುವ ಬದಲಾವಣೆಗಳ ಜಾರಿಯನ್ನು ಈ ವರ್ಷದ ಡಿಸೆಂಬರ್ 31ರವರೆಗೆ ಮುಂದೂಡುವುದಾಗಿ ಇಲಾಖೆಯು ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಟ್ರಂಪ್ ಸರಕಾರದ ನೀತಿಯು ಮಾರ್ಚ್ 9ರಂದು ಜಾರಿಗೆ ಬರಬೇಕಾಗಿತ್ತು.