ಮಕ್ಕಳ ಮೇಲೆ ಕೊವ್ಯಾಕ್ಸಿನ್ ಪ್ರಯೋಗಕ್ಕೆ ಸಿದ್ಧತೆ

ನಾಗ್ಪುರ, ಫೆ.7: ಮಕ್ಕಳನ್ನು ಅದರಲ್ಲೂ ಮುಖ್ಯವಾಗಿ ಪ್ರಾಥಮಿಕ ಹಂತದ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಹಾಗೂ 18 ವರ್ಷದೊಳಗಿನವರಿಗೆ ಲಸಿಕೆ ನೀಡಲು ಅನುಮತಿ ನೀಡಲಾಗುತ್ತದೆಯೇ ಎಂದು ತಿಳಿಯಲು ತುದಿಗಾಲಲ್ಲಿ ನಿಂತಿರುವ ಪೋಷಕರು ನಿರಾಳವಾಗಬಹುದು. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಕೋವಿಡ್-19 ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಿಸಲು ಸಿದ್ಧತೆ ನಡೆದಿದೆ. ಫೆಬ್ರವರಿ ಕೊನೆಗೆ ಅಥವಾ ಮಾರ್ಚ್ ಮೊದಲ ವಾರ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಪರೀಕ್ಷಾರ್ಥವಾಗಿ ನೀಡಲು ನಿರ್ಧರಿಸಲಾಗಿದೆ.
2ರಿಂದ 18 ವರ್ಷದೊಳಗಿನವರಿಗೆ ಲಸಿಕೆ ನೀಡುವ ಸಲುವಾಗಿ ನಗರದ ಪ್ರಮುಖ ಮಕ್ಕಳ ಆಸ್ಪತ್ರೆಯೊಂದನ್ನು ಆಯ್ಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ. ಭಾರತ ಸರಕಾರದಿಂದ ಈ ಯೋಜನೆಗೆ ಅನುಮತಿ ದೊರಕಿದ ತಕ್ಷಣ ಪರೀಕ್ಷಾರ್ಥ ಪ್ರಯೋಗಕ್ಕೆ ಭಾರತ್ ಬಯೋಟೆಕ್ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಅಂದರೆ 2021ರ ಮೇ ತಿಂಗಳ ಒಳಗಾಗಿ ಮಕ್ಕಳ ಲಸಿಕೆ ಸಿದ್ಧವಾಗಲಿದೆ ಎಂದು ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಜನವರಿಯಲ್ಲಿ ಪ್ರಕಟಿಸಿದ್ದರು.
"ಮಕ್ಕಳ ಮೇಲೆ ನಡೆಯುತ್ತಿರುವ ಪ್ರಪ್ರಥಮ ಪರೀಕ್ಷಾರ್ಥ ಪ್ರಯೋಗ ಇದಾಗಿದ್ದು, ಪುಟ್ಟ ಬಾಲಕರಿಂದ ಹಿಡಿದು ಹದಿಹರೆಯದವರು ಇದರಲ್ಲಿ ಸೇರಲಿದ್ದಾರೆ" ಎಂದು ಈ ಟ್ರಯಲ್ಸ್‌ನ ಸಂಯೋಜಕ ಡಾ.ಆಶೀಶ್ ತಾಂಜೆ ಹೇಳಿದ್ದಾರೆ.
ಕೊವ್ಯಾಕ್ಸಿನ್‌ನ 1, 2 ಹಾಗೂ 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆದ ನಾಗ್ಪುರವನ್ನೇ ಮಕ್ಕಳ ಮೇಲಿನ ಪ್ರಯೋಗಕ್ಕೂ ಆಯ್ಕೆ ಮಾಡಿಕೊಳಲಾಗಿದೆ. ಸದ್ಯವೇ ಶ್ವಾಸಮಾರ್ಗದ ಮೂಲಕವೂ ಕೊವ್ಯಾಕ್ಸಿನ್ ನೀಡುವ ಪ್ರಯೋಗವೂ ಆರಂಭವಾಗಲಿದೆ. ಆದಾಗ್ಯೂ ಮಕ್ಕಳ ಮೇಲಿನ ಪ್ರಯೋಗಕ್ಕೆ ವಿಶೇಷ ಮಹತ್ವವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.







