ಇಂದೋರ್ ಜೈಲಿನಿಂದ ಬಿಡುಗಡೆಯಾದ ಮುನವ್ವರ್ ಫಾರೂಕಿ

ಹೊಸದಿಲ್ಲಿ:ಹಿಂದೂ ದೇವತೆಗಳು ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕುರಿತಂತೆ ಅಸಭ್ಯವಾಗಿ ಜೋಕ್ ಮಾಡಿದ್ದಾರೆಂಬ ಆರೋಪದಲ್ಲಿ ಒಂದು ತಿಂಗಳಿಗೂ ಅಧಿಕ ಸಮಯದಿಂದ ಬಂಧನದಲ್ಲಿದ್ದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರನ್ನು ರವಿವಾರ ಮಧ್ಯಪ್ರದೇಶದ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಫಾರೂಕಿ ಅವರನ್ನು ಬಿಡುಗಡೆ ಮಾಡುವ ಗಂಟೆಗಳ ಮೊದಲು ಇಂದೋರ್ ಜೈಲು ಅಧಿಕಾರಿಗಳು, ನಾವು ಇನ್ನಷ್ಟೇ ಸುಪ್ರೀಂಕೋರ್ಟ್ ಆದೇಶವನ್ನು ಸ್ವೀಕರಿಸಬೇಕಾಗಿದೆ ಎಂದು ಹೇಳಿದ್ದಾರೆ.
"ಈ ವಿಷಯವು ನ್ಯಾಯಾಲಯದ ಮುಂದಿದೆ. ನ್ಯಾಯಾಂಗದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಹಾಗೂ ಈ ಹಂತದಲ್ಲಿ ಯಾವುದೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ'' ಎಂದು ಮಧ್ಯರಾತ್ರಿಯ ಬಳಿಕ ಬಿಡುಗಡೆಯಾದ ಬಳಿಕ ಫಾರೂಕಿ ಎನ್‍ಡಿಟಿವಿಗೆ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಶುಕ್ರವಾರ ಫಾರೂಕಿಗೆ ಜಾಮೀನು ಮಂಜೂರು ಮಾಡಿತ್ತು. ಮಧ್ಯಪ್ರದೇಶ ಸರಕಾರಕ್ಕೆ ನೋಟಿಸ್ ನೀಡಿದ್ದ ಸುಪ್ರೀಂಕೋರ್ಟ್, ಕಾಮಿಡಿಯನ್ ಫಾರೂಕಿ ವಿರುದ್ಧ ಉತ್ತರಪ್ರದೇಶ ಸರಕಾರ ನೀಡಿದ್ದ ವಾರಂಟ್ ಗೆ ತಡೆ ನೀಡಿತ್ತು.
ಆಯೋಜಕರು ಕಾರ್ಯಕ್ರಮ ನೀಡಲು ನನ್ನನ್ನು ಆಹ್ವಾನಿಸಿದ್ದರು. ನಾನು ಕಾರ್ಯಕ್ರಮ ನೀಡಿದ್ದೆ. ಆ ದಿನ ನಾನು ಅಸಭ್ಯ ಜೋಕ್ ಗಳನ್ನು ಮಾಡಿರಲಿಲ್ಲ ಎಂದು ಫಾರೂಕಿ ಹೇಳಿದ್ದಾರೆ.
ಫಾರೂಕಿ ಬಂಧನದ ವೇಳೆ ಕಾರ್ಯವಿಧಾನವನ್ನು ಅನುಸರಿಸಲಾಗಿಲ್ಲ ಎಂದು ಉನ್ನತ ನ್ಯಾಯಾಲಯ ಒಪ್ಪಿಕೊಂಡಿತು. ಬಿಜೆಪಿ ಶಾಸಕ ನೊಬ್ಬನ ಮಗ ಏಕಲವ್ಯ ಸಿಂಗ್ ನೀಡಿದ ದೂರಿನ ಮೇರೆಗೆ ಸಲ್ಲಿಸಿರುವ ಎಫ್ ಐಆರ್ ಅಸ್ಪಷ್ಟವಾಗಿತ್ತು ಎಂದು ನ್ಯಾಯಾಲಯ ತಿಳಿಸಿತು.







