ರೈತ ಸಂಘಟನೆಯ ಇಬ್ಬರು ನಾಯಕರನ್ನು ಅಮಾನತುಗೊಳಿಸಿದ ಸಂಯುಕ್ತ ಕಿಸಾನ್ ಮೋರ್ಚಾ
ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಮಾರ್ಗ ಉಲ್ಲಂಘನೆ ಆರೋಪ

ಹೊಸದಿಲ್ಲಿ: ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳ ಮಾತೃ ಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಂ)ರವಿವಾರ ಇಬ್ಬರು ರೈತ ಸಂಘಟನೆಯ ನಾಯಕರುಗಳಾದ ಹರ್ಪಲ್ ಸಂಘಾ(ಅಝಾದ್ ಕಿಸಾನ್ ಸಮಿತಿ(ದವೊಬಾ)ಅಧ್ಯಕ್ಷ ಹಾಗೂ ಸುರ್ಜಿತ್ ಸಿಂಗ್ ಫುಲ್, ಭಾರತೀಯ ಕಿಸಾನ್ ಯೂನಿಯನ್(ಕ್ರಾಂತಿಕಾರಿ)ರನ್ನು ಅಮಾನತುಗೊಳಿಸಿದೆ.
ಜನವರಿ 26ರಂದು ಗಣರಾಜ್ಯೋತ್ಸವದಂದು ರಾಷ್ಟ್ರರಾಜಧಾನಿಯಲ್ಲಿ ಆಯೋಜಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಗೊತ್ತುಪಡಿಸಿದ್ದ ಮಾರ್ಗವನ್ನು ಬಿಟ್ಟು ನಿಯಮ ಉಲ್ಲಂಘಿಸಿದ್ದಕ್ಕೆ ಈ ಕ್ರಮಕೈಗೊಳ್ಳಲಾಗಿದೆ. ಮಂಗಳವಾರ(ಜ.26)ಬೆಳಗ್ಗೆ ಸಿಂಘು ಗಡಿಯಲ್ಲಿ ಬೆಳಗ್ಗೆ 8:30ರ ಸುಮಾರಿಗೆ 6,000ರಿಂದ7,000 ಟ್ರ್ಯಾಕ್ಟರ್ ಗಳು ಜಮಾಯಿಸಿದ್ದವು. ಪೂರ್ವ ನಿರ್ಧರಿತ ಮಾರ್ಗಗಳಲ್ಲಿ ಸಾಗುವ ಬದಲಿಗೆ ಹಲವು ಬಾರಿ ವಿನಂತಿಸಿದ ಹೊರತಾಗಿಯೂ ಕೇಂದ್ರ ದಿಲ್ಲಿಯತ್ತ ಟ್ರ್ಯಾಕ್ಟರ್ ಗಳನ್ನು ನುಗ್ಗಿಸಲಾಗಿತ್ತು. ನಿಹಾಂಗ್ ಗಳ ನೇತೃತ್ವದಲ್ಲಿ ಕುದುರೆಗಳ ಮೇಲೆ ಏರಿ, ಕೈಯಲ್ಲಿ ಖಡ್ಗಗಳು, ಕಿರ್ಪಾಣಗಳನ್ನು ಹಿಡಿದು ಹಲವು ಬ್ಯಾರಿಕೇಡ್ ಗಳನ್ನು ಮುರಿದು ಮುನ್ನುಗ್ಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.





