ಸರಕಾರದಿಂದ ಟೋಲ್ ಗೇಟ್ ವಸೂಲಿಗೆ ಸಂಬಂಧಿಸಿದ ಕಾನೂನು ಉಲ್ಲಂಘನೆ: ವೆಲ್ಪೇರ್ ಪಾರ್ಟಿ ಆರೋಪ
ಮಂಗಳೂರು, ಫೆ7: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್ ವಸೂಲಿ ಸಂಬಂಧಿ ಕಾನೂನುಗಳು ಇಂದು ಆಡಳಿತ ವರ್ಗದ ಮೂಲಕವೇ (ಸರಕಾರದಿಂದಲೇ) ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಇದು ದುರದೃಷ್ಟಕರ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಮ್. ಎಸ್. ಮುತ್ತಲಿಬ್ ಹೇಳಿದ್ದಾರೆ.
ಕಾನೂನು ಪ್ರಕಾರ, ಹೆದ್ದಾರಿಯಲ್ಲಿರುವ ಟೋಲ್ ಗೇಟ್ ಗಳ ಮಧ್ಯೆ ಕನಿಷ್ಠ 60 ಕಿ.ಮೀ.ಅಂತರ ಇರಬೇಕು. ಇದು ನಿರ್ದಿಷ್ಟ ಪ್ರದೇಶದಲ್ಲಿರುವ ಯಾವುದೇ ರಸ್ತೆಗಳಲ್ಲಿ ಪಾವತಿಸುವ ಪ್ರತ್ಯೇಕ ರಹದಾರಿ ಸುಂಕಕ್ಕೆ ಅನ್ವಯವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳಡಿಯಲ್ಲೂ ಇದನ್ನೇ ಕಾಣಬಹುದು. ಆದರೆ ಇಂದು ನವಯುಗ ನಿರ್ಮಾಣ್ ಸಂಸ್ಥೆಯವರ ಕಾಮಗಾರಿ ಮುಗಿದು ವರ್ಷಗಳೇ ಸಂದಿದ್ದರೂ ಸರಕಾರದ ಪೂರ್ಣ ಅನುಮತಿಯೊಂದಿಗೆ ಇಂದಿಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಪ್ರಯಾಣಿಕರಿಂದ ದುಬಾರಿ ಶುಲ್ಕವನ್ನು ದೋಚುವ ಪರಿಪಾಠವು ಮುಂದುವರಿದಿದೆ. ಇವರ ಅತಿ ಶೋಷಣೆಯ ವಿರುದ್ಧ ಕೆಲವೊಮ್ಮೆ ಸಾರ್ವಜನಿಕರು ಎಚ್ಚತ್ತುಕೊಂಡಾಗ ಮಾತ್ರ ನಮ್ಮ ಸಂಸದರು ಇದನ್ನು ಖಂಡಿಸುವ ಪ್ರಹಸನವನ್ನು ಮಾಡಿ ಪತ್ರಿಕಾ ಹೇಳಿಕೆ ಕೊಡುವುದು ಸಾಮಾನ್ಯವಾಗಿದೆ ಎಂದವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಇಂದು ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಪ್ರದೇಶ ತಲಪಾಡಿಯಲ್ಲಿ ಟೋಲ್ ಪಾವತಿಸಿ ಮುಂದುವರಿದರೆ ಅರವತ್ತು ಕಿ.ಮೀ. ಅಂತರದಲ್ಲಿ ಮೂರು ಬಾರಿ ಎಂಬಂತೆ ಸುರತ್ಕಲ್ ನಲ್ಲಿ ಮುಂದುವರಿದು ಉಡುಪಿಯಲ್ಲಿ ಮತ್ತೆ ಟೋಲ್ ಪಾವತಿಸಬೇಕಿದೆ. ಇತ್ತ ಬಿ.ಸಿ.ರೋಡ್ ಬಳಿಯ ಬ್ರಹ್ಮರಕೂಟ್ಲುವಿನಲ್ಲಿ ದುಡ್ಡು ಕೊಟ್ಟು ಪ್ರಯಾಣ ಮುಂದುವರಿಸಿದವನು ಪಂಪ್ ವೆಲ್ ನಿಂದ ಹೆದ್ದಾರಿಯ ಯಾವ ರಸ್ತೆ ಹಿಡಿದರೂ ಇಪ್ಪತ್ತು ಕಿ.ಮೀ. ಸಾಗುವ ಮೊದಲೇ ಮತ್ತೆ ಟೋಲ್ ತೆರಬೇಕು. ಆದುದರಿಂದ ಇಷ್ಟೊಂದು ಕಾನೂನುಬಾಹಿರ ವಸೂಲಿ ಕೇಂದ್ರಗಳನ್ನು ತೆರವುಗೊಳಿಸಲು ಸರಕಾರವು ಕ್ರಮಗಳನ್ನು ಕೈಗೊಳ್ಳಲು ಮುಂದಡಿಯಿಡದಿದ್ದಲ್ಲಿ, ಸಾರ್ವಜನಿಕ ಹಿತಾಸಕ್ತಿಗಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾವು ಸಮಾನ ಮನಸ್ಕ ಪಕ್ಷಗಳು ಮತ್ತು ಸಂಘಟನೆಗಳ ಜೊತೆ ಸೇರಿ ಐಕ್ಯ ವೇದಿಕೆಯಲ್ಲಿ ಹೋರಾಟ ಹಮ್ಮಿಕೊಳ್ಳಲಿದೆ ಎಂದವರು ಪ್ರಕಟನೆಯ ಮೂಲಕ ಎಚ್ಚರಿಸಿದ್ದಾರೆ.







