ಸುರತ್ಕಲ್ ಟೋಲ್‌ಗೇಟ್ ರದ್ಧತಿ ಕುರಿತು ವಿವಿಧ ಸಂಘಟನೆಗಳ ಸಭೆ

ಮಂಗಳೂರು, ಫೆ.7: ಟೋಲ್‌ಗೇಟ್‌ಗಳಲ್ಲಿ ಫಾಸ್ಟಾಗ್ ಕಡ್ಡಾಯ ಮಾಡುವುದು ಮತ್ತು ಸ್ಥಳೀಯರಿಗೆ ವಿನಾಯಿತಿ ರದ್ದುಗೊಳಿಸಲು ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳೀಯ ವಿವಿಧ 44 ಸಂಘಟನೆಗಳ ಪ್ರಮುಖರು ರವಿವಾರ ಮುಕ್ಕದಲ್ಲಿರುವ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ.
ಸುರತ್ಕಲ್‌ನಲ್ಲಿರುವ ಟೋಲ್‌ಗೇಟ್ ಅಕ್ರಮವಾಗಿದೆ. ಅದಕ್ಕೆ ಮಾನ್ಯತೆ ಇಲ್ಲ. ಈ ಹಿಂದೆ ಅನೇಕ ಬಾರಿ ಪ್ರತಿಭಟನೆ ನಡೆಸಿದಾಗ ಜನಪ್ರತಿನಿಧಿ ಗಳು ಅದನ್ನು ರದ್ದುಗೊಳಿಸುತ್ತೇವೆ ಮತ್ತು ಹೆಜಮಾಡಿ ಜೊತೆ ವಿಲೀನ ಮಾಡುತ್ತೇವೆ ಎಂದಿದ್ದರು. ಆದರೆ ಅದಿನ್ನೂ ಮುಂದುವರಿದುದರಿಂದ ಅಸಮಾಧಾನಗೊಂಡಿರುವ ಸ್ಥಳೀಯರು ಟೋಲ್‌ಗೇಟ್ ರದ್ಧತಿಗೆ ಸಭೆಯಲ್ಲಿ ಆಗ್ರಹಿಸಿದರು.
ಟೋಲ್‌ಗೇಟ್ ಬಗ್ಗೆ ಆನ್‌ಲೈನ್ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದು, ಸಂಸದರು, ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರಿಗೆ ಮನವಿ ಸಲ್ಲಿಸುವುದು, ಫೆ.10ರಂದು ಮತ್ತೊಂದು ಸುತ್ತಿನ ಸಭೆ ಸೇರುವುದು ಇತ್ಯಾದಿ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಮುಖಂಡರಾದ ರಾಜಮೋಹನ್‌ರಾವ್, ಯತೀಶ್ ಬೈಕಂಪಾಡಿ, ದಿನಕರ ಪಟ್ಣ, ಹರೀಶ್, ಅನಿಲ್ ಮತ್ತಿತರರು ಪಾಲ್ಗೊಂಡಿದ್ದರು.







