"ಎಲ್ಲೇ ಇದ್ದರೂ ಪ್ರತಿಭಟಿಸಿ, ಈ ಹಿಂದೆ ಅಮೆರಿಕದ ಪೊಲೀಸರು ಮೊಣಕಾಲೂರಿ ಕ್ಷಮೆಯಾಚಿಸಿದ್ದನ್ನು ನಾವು ನೋಡಿದ್ದೇವೆ"
ರೈತರಿಗೆ ಬೆಂಬಲ ವ್ಯಕ್ತಪಡಿಸಿದ ಮಲಯಾಳಂ ನಟ ಸಲೀಂ ಕುಮಾರ್

ತಿರುವನಂತಪುರಂ: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಹಲವಾರು ದೇಶ ವಿದೇಶ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ಮಲಯಾಳಂ ಚಿತ್ರರಂಗದ ಖ್ಯಾತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಲೀಂ ಕುಮಾರ್ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಹೊರಗಿವರು ನಮ್ಮ ವಿಚಾರಗಳಲ್ಲಿ ತಲೆ ಹಾಕಬಾರದು ಎಂಬ ಹೇಳಿಕೆಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಲೀಂ ಕುಮಾರ್, "ಅಮೆರಿಕದಲ್ಲಿ ವರ್ಣಭೇದ ನೀತಿಯ ಹೆಸರಿನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಮನುಷ್ಯನನ್ನು ಬಿಳಿ ಬಣ್ಣದ ಪೊಲೀಸ್ ಅಧಿಕಾರಿಗಳು ಹೊಡೆದು ಸಾಯಿಸುವ ಕರುಣಾಜನಕ ಚಿತ್ರವು ಎಂತಹಾ ಮನುಷ್ಯನ ಹೃದಯವನ್ನೂ ಹೆಪ್ಪುಗಟ್ಟಿಸುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರೀಯತೆ ಮತ್ತು ಜನಾಂಗದ ತಾರತಮ್ಯವನ್ನು ಲೆಕ್ಕಿಸದೆ ಎಲ್ಲರೂ ಅಮೆರಿಕದ ವಿರುದ್ಧ ಪ್ರತಿಕ್ರಿಯಿಸಿದರು. ನಾವು ಭಾರತೀಯರು ಕೂಡ ಆ ಗುಂಪಿನಲ್ಲಿದ್ದೆವು. ಆಗ ಯಾವುದೇ ಅಮೆರಿಕನ್ ಬಂದು "ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಿದ್ದರೆ ಸಾಕು" ಎಂದು ಹೇಳಲಿಲ್ಲ. ನಮ್ಮ ದೇಶದ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ನಮಗೆ ತಿಳಿದಿದೆ ಎಂದು ಹೇಳಲಿಲ್ಲ.
ಬದಲಾಗಿ ಅವರು ವಿಶ್ವ ಪ್ರತಿಭಟನೆಯನ್ನು ಎರಡೂ ಕೈಗಳಿಂದ ಸ್ವಾಗತಿಸಿದರು. ಇದಲ್ಲದೆ, ಅಮೆರಿಕಾದ ಪೊಲೀಸ್ ಮುಖ್ಯಸ್ಥರು ಮೊಣಕಾಲುಗಳ ಮೇಲೆ ನಿಂತು ಪ್ರತಿಭಟನಾಕಾರರೊಂದಿಗೆ ಕ್ಷಮೆಯಾಚಿಸುತ್ತಿರುವುದನ್ನು ನಾವು ನೋಡಿದ್ದೇವೆ. ಅಂದು ವಿಶ್ವಾದ್ಯಂತ ಪ್ರತಿಭಟನೆ ನಡೆದಾಗ ಅಮೆರಿಕನ್ನರು ಏನೂ ಕಳೆದುಕೊಂಡಿರಲಿಲ್ಲ"
"ಈಗ ವಿದೇಶಿ ಕಲಾವಿದರು, ರಿಹಾನ್ನಾ ಮತ್ತು ಗ್ರೆಟಾ ಅವರಂತಹ ಕಾರ್ಯಕರ್ತರು ಪ್ರತಿಭಟಿಸಿದಾಗ ಭಾರತೀಯರಾದ ನಮಗೆ ನಷ್ಟವಾದದ್ದಾದರೂ ಏನು? ಪ್ರತಿಭಟನೆ ನಡೆಸಬೇಕಾದವರು ಎಲ್ಲೇ ಇದ್ದರೂ ಪ್ರತಿಭಟನೆ ನಡೆಸಲಿದ್ದಾರೆ. ಇದಕ್ಕೆ ಯಾವುದೇ ರಾಷ್ಟ್ರೀಯ ಮಿತಿಗಳಿಲ್ಲ, ರಾಜಕೀಯ ಮಿತಿಗಳಿಲ್ಲ, ವರ್ಗ ಮಿತಿಗಳಿಲ್ಲ, ಬಣ್ಣ ಮಿತಿಗಳಿಲ್ಲ. ಯಾವಾಗಲೂ ಬೆಳಕನ್ನು ರಕ್ಷಿಸುವ ರೈತರೊಂದಿಗೆ" ಎಂದು ಸಲೀಂ ಕುಮಾರ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
അമേരിക്കയിൽ വർഗ്ഗീയതയുടെ പേരിൽ ഒരു വെളുത്തവൻ തന്റെ മുട്ടുകാലുകൊണ്ട് ശ്വാസം മുട്ടിച്ചു കൊല്ലുന്ന കറുത്തവനായ ജോർജ്...
Posted by Salim Kumar on Thursday, 4 February 2021







