ದಿಲ್ಲಿಯಿಂದ ರಾಜ್ಯಕ್ಕೆ ಆಗಮಿಸಿದ ಮುಹಮ್ಮದ್ ನಲಪಾಡ್‍ಗೆ ಬೆಂಬಲಿಗರಿಂದ ಅದ್ದೂರಿ ಸ್ವಾಗತ

ಬೆಂಗಳೂರು, ಫೆ. 7: ಹೊಸದಿಲ್ಲಿಯಿಂದ ರವಿವಾರ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹಾರಿಸ್ ಅವರ ಪುತ್ರ ಮುಹಮ್ಮದ್ ಹಾರಿಸ್ ನಲಪಾಡ್ ಅವರನ್ನು ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ರವಿವಾರ ಮಧ್ಯಾಹ್ನದ ವೇಳೆಗೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ದೊಡ್ಡ ಸೇಬಿನ ಹಾರ, ಹೂವಿನ ಹಾರ, ತುರಾಯಿ ಹಾಕಿ, ಮೈಸೂರು ಪೇಟಾ ತೊಡಿಸಿ ಅವರ ಅಭಿಮಾನಿಗಳ ರಾಜ್ಯಕ್ಕೆ ಸ್ವಾಗತ ಕೋರಿದರು. ಅಲ್ಲದೆ, ಅಲ್ಲಿಂದ ಬೆಂಬಲಿಗರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಆಗಮಿಸಿದರು. ಇದೇ ವೇಳೆ ಶಿವಕುಮಾರ್ ನಲಪಾಡ್ ಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಹಮ್ಮದ್ ಹಾರಿಸ್ ನಲಪಾಡ್, ‘ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಪಕ್ಷ ನನ್ನ ತಾಯಿಯಿದ್ದಂತೆ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನನಗೆ ಅತಿ ಹೆಚ್ಚು ಮತಗಳನ್ನು ನೀಡಿ ಕಾರ್ಯಕರ್ತರು ನನಗೆ ಪ್ರೀತಿ ಕೊಟ್ಟಿದ್ದಾರೆ. ತಾಂತ್ರಿಕ ಕಾರಣಗಳಿಗಾಗಿ ಕೆಲ ಸಣ್ಣಪುಟ್ಟ ಸಮಸ್ಯೆಗಳಾಗಿವೆ. ಆದರೂ ನನಗೆ ಪಕ್ಷದ ಮೇಲೆ ಭರವಸೆ ಇದೆ' ಎಂದರು.
ನಾನು ಎಂದೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಹೀಗಾಗಿ ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಅಭಿಮಾನ ದೊಡ್ಡದು ಎಂದು ಮುಹಮ್ಮದ್ ಹಾರಿಸ್ ನಲಪಾಡ್ ಇದೇ ವೇಳೆ ಬಣ್ಣಿಸಿದರು. ನೂರಾರು ಬೆಂಬಲಿಗರು ಅವರಿಗೆ ದೊಡ್ಡ ದೊಡ್ಡ ಹೂವಿನಹಾರ ಹಾಕಿ, ಹೂಗುಚ್ಚ ನೀಡಿ ಶುಭ ಕೋರಿದರು.







