ಹಣ ನೀಡುವಂತೆ ಬೆದರಿಕೆ ಪ್ರಕರಣ: ಆರೋಪಿ ಸೆರೆ

ಮಣಿಪಾಲ, ಫೆ.7: ಕುತ್ತಿಗೆಯನ್ನು ಬಲವಾಗಿ ಹಿಡಿದು ಹಣ ನೀಡುವಂತೆ ಕೊಡುವಂತೆ ಬೆದರಿಸಿದ ಪ್ರಕರಣದ ಆರೋಪಿಯನ್ನು ಮಣಿಪಾಲ ಪೊಲೀಸರು ಬಾಗಲಕೋಟೆಯಲ್ಲಿ ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬಸವರಾಜ್ (25) ಬಂಧಿತ ಆರೋಪಿ.
ಇತ್ತೀಚೆಗೆ ಮಣಿಪಾಲದ ದಿಲೀಪ್ ಕುಮಾರ್ ರೈ ಇಂಡಿಯನ್ ನರ್ಸರಿಯಲ್ಲಿ ಕೆಲಸಕ್ಕೆ ಬಂದಿದ್ದ ಈತ, ಮನೆಯ ಬಳಿಯಲ್ಲಿ ಒಂದು ಹಾವು ಹೋಯಿತು ಬಂದು ನೋಡಿ ಎಂದು ಹೇಳಿ ದಿಲೀಪ್ ಕುಮಾರ್ ರೈ ರವರನ್ನು ಕರೆದುಕೊಂಡು ಹೋಗಿ, ಕುತ್ತಿಗೆಯನ್ನು ಬಲವಾಗಿ ಹಿಡಿದು ನಂತರ ದೂಡಿ 10 ಸಾವಿರ ರೂ. ಕೊಡುವಂತೆ ಬೆದರಿಸಿ ಓಡಿ ಹೋಗಿದ್ದನು ಎಂದು ದೂರಲಾಗಿದೆ.
ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ. ನೇತೃತ್ವದಲ್ಲಿ ಎಸ್ಸೈ ರಾಜ್‌ಶೇಖರ ವಂದಲಿ, ಪ್ರೊಬೆಷನರಿ ಎಸ್ಸೈಗಳಾದ ನಿರಂಜನ್ ಗೌಡ ಮತ್ತು ದೇವರಾಜ ಬಿರದಾರ, ಎಎಸ್‌ಐ ಶೈಲೇಶ್‌ಕುಮಾರ್, ಸಿಬ್ಬಂದಿ ಪ್ರಸನ್ನ, ಉಮೇಶ್, ಯಲ್ಲನ ಗೌಡ ತಂಡ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Next Story





