ರೈತರ ಪ್ರತಿಭಟನೆ ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ:ಕೃಷಿ ಸಚಿವ ತೋಮರ್

ಗ್ವಾಲಿಯರ್,ಫೆ.7: ಕೇಂದ್ರದ ಮೂರು ನೂತನ ಕೃಷಿಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ರವಿವಾರ ಇಲ್ಲಿ ಹೇಳಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು,ಸರಕಾರವು ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆಗೆ ಸಿದ್ಧವಿದೆ ಮತ್ತು ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ತಾನು ಆಶಿಸಿದ್ದೇನೆ ಎಂದು ನುಡಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬ ಕಾಂಗ್ರೆಸ್ ಬೇಡಿಕೆ ಮತ್ತು ಪ್ರತಿಪಕ್ಷಗಳ ಇತರ ಆರೋಪಗಳ ಕುರಿತು ಪ್ರಶ್ನೆಗೆ,ರೈತರ ಪ್ರತಿಭಟನೆ ಕುರಿತು ಪ್ರತಿಪಕ್ಷ ಕಾಂಗ್ರೆಸ್ ರಾಜಕೀಯವಾಡುತ್ತಿದೆ. ರೈತರ ಸಮಸ್ಯೆಗಳ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ಹಕ್ಕು ಇಲ್ಲ. ತಾನು ಅಧಿಕಾರದಲ್ಲಿದ್ದಾಗ ಅದು ರೈತರಿಗಾಗಿ ಏನನ್ನೂ ಮಾಡಲಿಲ್ಲವೇಕೆ? 2019ರ ಲೋಕಸಭಾ ಚುನಾವಣೆಯ ಸಂದರ್ಭ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇಂತಹುದೇ ಸುಧಾರಣೆಗಳನ್ನು ಅದು ಭರವಸೆ ನೀಡಿತ್ತು. ಆದರೆ ಈಗ ಅದು ತಿಪ್ಪರಲಾಗ ಹಾಕುತ್ತಿದೆ ಎಂದು ಉತ್ತರಿಸಿದರು.
ರೈತರ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಅದರಲ್ಲಿ ಯಶಸ್ವಿಯಾಗುವುದಿಲ್ಲ ಎಂದೂ ತೋಮರ್ ಹೇಳಿದರು.





