'ಕುಟುಂಬದ ಬೆಳ್ಳಿಯನ್ನು ಮಾರಾಟ ಮಾಡುತ್ತಿರುವ ಕೇಂದ್ರ ಸರಕಾರʼ: ಆರೋಪವನ್ನು ತಿರಸ್ಕರಿಸಿದ ವಿತ್ತ ಸಚಿವೆ

ಮುಂಬೈ,ಫೆ.7: ಸರಕಾರವು ‘ಕುಟುಂಬದ ಬೆಳ್ಳಿಯನ್ನು ಮಾರಾಟ ಮಾಡುತ್ತಿದೆ ’ಎಂಬ ಪ್ರತಿಪಕ್ಷಗಳ ಆರೋಪವನ್ನು ರವಿವಾರ ಇಲ್ಲಿ ತಿರಸ್ಕರಿಸಿದ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ತೆರಿಗೆದಾತರ ಹಣವು ವಿವೇಚನೆಯಿಂದ ವೆಚ್ಚವಾಗುವಂತೆ ಸರಕಾರವು ಇದೇ ಮೊದಲ ಬಾರಿಗೆ ಹೂಡಿಕೆ ಹಿಂದೆಗೆತ ಕುರಿತು ಸ್ಪಷ್ಟ ಕಾರ್ಯತಂತ್ರವನ್ನು ರೂಪಿಸಿದೆ ಎಂದು ಹೇಳಿದರು.
ತೆರಿಗೆದಾರರ ಹಣವು ವಿವೇಚನೆಯಿಂದ ವೆಚ್ಚವಾಗುವಂತೆ ನೋಡಿಕೊಳ್ಳಲು ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿಯ ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು)ಗಳು ಚೆನ್ನಾಗಿ ಕಾರ್ಯ ನಿರ್ವಹಿಸಬೇಕು ಎಂದು ಸರಕಾರವು ಬಯಸಿದೆ ಎಂದು ಇಲ್ಲಿ ಉದ್ಯಮ ದಿಗ್ಗಜರ ಸಮಾವೇಶದಲ್ಲಿ ಮಾತನಾಡುತ್ತ ಹೇಳಿದ ಸೀತಾರಾಮನ್,ಪ್ರತಿಪಕ್ಷ ಹೇಳುತ್ತಿರುವಂತೆ ಇದು ಕುಟುಂಬದ ಬೆಳ್ಳಿಯ ಮಾರಾಟ ಅಲ್ಲವೇ ಅಲ್ಲ. ಕುಟುಂಬದ ಬೆಳ್ಳಿ ಅಥವಾ ಪಿಎಸ್‌ಯುಗಳನ್ನು ಬಲಗೊಳಿಸಬೇಕಿದೆ ಮತ್ತು ಅದು ನಮ್ಮ ಶಕ್ತಿಯಾಗಬೇಕಿದೆ. ನೀವು (ಪ್ರತಿಪಕ್ಷ ) ಪಿಎಸ್‌ಯುಗಳ ಬಗ್ಗೆ ಗಮನ ನೀಡದ್ದರಿಂದ ಅವುಗಳಲ್ಲಿ ಹೆಚ್ಚಿನವು ಬದುಕುಳಿಯುವ ಸ್ಥಿತಿಯಲ್ಲಿಲ್ಲ ಮತ್ತು ಉತ್ತಮ ಸಾಧನೆ ಮಾಡಬಲ್ಲ ಕೆಲವು ಪಿಎಸ್‌ಯುಗಳಿಗೆ ಸೂಕ್ತ ಗಮನ ದೊರೆಯುತ್ತಿಲ್ಲ ಎಂದರು.
ಈ ನೀತಿಯ ಮೂಲಕ ಅವುಗಳಲ್ಲಿ ಸುಧಾರಣೆ ತರುವುದು ಸರಕಾರದ ಉದ್ದೇಶವಾಗಿದೆ. ಅವು ಬೆಳೆಯುತ್ತಿರುವ ಭಾರತದ ಆಕಾಂಕ್ಷೆಗಳನ್ನು ಈಡೇರಿಸಲು ಎತ್ತರಕ್ಕೆ ಬೆಳೆಯಬೇಕಾಧ ಅಗತ್ಯವಿದೆ ಎಂದರು.





