ಜೀವನದ ಗುರಿ ಸಾಧಿಸಲು ಈಗಲೇ ಸಿದ್ಧರಾಗಿ: ಡಾ.ವೆಂಕಟರಮಣ

ಉಡುಪಿ, ಫೆ. 7: ದೇಶದಲ್ಲಿ ಪ್ರಸ್ತುತ ಉದ್ಯೋಗಾರ್ಹತೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಏನಾಗಬೇಕು ಎಂದು ಈಗಲೇ ನಿರ್ಧರಿಸಿಕೊಳ್ಳಬೇಕು ಮತ್ತು ಅದಕ್ಕೆ ಬೇಕಾದ ತಯಾರಿ ನಡೆಸಬೇಕು ಎಂದು ನವ ಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಹೇಳಿದ್ದಾರೆ.
ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಇಂದು ನಡೆದ 2020-21ನೇ ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ವ್ಯಕ್ತಿಯ ಮೌಲ್ಯವನ್ನು ಅವರ ಪಾತ್ರದಿಂದ ನೋಡುವ ಬದಲು ಅವರ ಅರ್ಹತೆಯಿಂದ ನೋಡಬೇಕು. ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಈ ಸಂಸ್ಥೆಯಿಂದ ಹೊರಬರಬೇಕೆಂದು ತಿಳಿಸಿದರು.
ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡ ಸಿಇಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕೃಷ್ಣರಾಜ್ ಕಾರಂತ್, ಆದಿತ್ಯ ಎಂ.ಆಚಾರ್ಯ, ಶ್ರೇಯಸ್ ಆರ್. ಅವರನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಸಿ.ಕೆ.ಮಂಜುನಾಥ್ ಶೈಕ್ಷಣಿಕ ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿ ಡಾ.ಸುಷ್ಮ ಅಕ್ಕರಾಜು ಮಾತನಾಡಿದರು. ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟ್ ಉಪಾಧ್ಯಕ್ಷ ಪಾಡಿಗಾರು ಶ್ರೀನಿವಾಸ ತಂತ್ರಿ, ಕಾರ್ಯದರ್ಶಿ ರತ್ನಕುಮಾರ್, ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಎನ್‌ಎಂಪಿಟಿಯ ರಾಜಶಂಕರ್, ವೆಂಕಟೇಶ್ ರಾವ್, ರವೀಂದ್ರ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ರೀನ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಉಷಾ ಎಚ್. ಮತ್ತು ಭಾಗ್ಯಲಕ್ಷ್ಮಿ ನಾವಡ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಪಕ ಸುಧೀರ್ ಮತ್ತು ಸವಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.







