ಬಿಜೆಪಿ- ಜೆಡಿಎಸ್ ಮೈತ್ರಿ ಸಭಾಪತಿ ಸ್ಥಾನಕ್ಕೆ ಮಾತ್ರ ಸೀಮಿತ: ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು, ಫೆ.7: ವಿಧಾನಪರಿಷತ್ತಿನಲ್ಲಿ ಸಭಾಪತಿ ಸ್ಥಾನಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಅದನ್ನು ಬಿಟ್ಟು ಬೇರೆ ಯಾವ ರೀತಿಯಲ್ಲೂ ಹೊಂದಾಣಿಕೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರವಿವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷಯಾಧಾರಿತವಾಗಿ, ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿಯಾಗುತ್ತೇವೆ. ಅದೇ ರೀತಿ ಸಭಾಪತಿ ಸ್ಥಾನಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಜನವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜಿ ಇಲ್ಲ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ರಾಜಕೀಯ ವಿಚಾರವನ್ನು ನಾನು ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದ್ದೇನೆ. ಧಾರ್ಮಿಕ ಗುರುಗಳೆ ಸಮಾಜದ ಪರವಾಗಿ ಹೋರಾಟಕ್ಕಿಳಿದಿದ್ದಾರೆ. ಹಾಗಾಗಿ ಇದು ದಾರಿತಪ್ಪುವ ಮುನ್ನ ಸರಕಾರ ಎಚ್ಚರಿಕೆ ವಹಿಸಬೇಕು. ಧಾರ್ಮಿಕ ಗುರುಗಳ ಭಾವನೆಗೂ ಸರಕಾರ ಗೌರವ ಕೊಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
ದಿಲ್ಲಿಯಲ್ಲಿನ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪ್ರಧಾನಮಂತ್ರಿಗೆ ರೈತರ ಬಗ್ಗೆ ಗೌರವ ಇದ್ದರೆ ಅವರನ್ನ ಕರೆದು ಸಭೆ ಮಾಡಬೇಕಿತ್ತು. ಕೃಷಿಮಂತ್ರಿಯನ್ನ ಬಿಟ್ಟು ಸಭೆ ಮಾಡಿಸುವ ಬದಲು ಇವರೇ ಸಭೆ ಮಾಡಲಿ. ಅವರ ಕಾಯ್ದೆಗಳಿಂದ ರೈತರಿಗೆ ಅನುಕೂಲ ಏನು ಎಂದು ತಿಳಿಸಿ, ರೈತರ ಗೊಂದಲಗಳಿಗೆ ಮನವರಿಕೆ ಮಾಡಲಿ ಎಂದರು.
ಈಗ ರೈತರು ಮುಂದಿನ ಅಕ್ಟೋಬರ್ ವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ. ಕಳೆದ 70 ದಿನಕ್ಕೂ ಹೆಚ್ಚು ದಿನಗಳಿಂದ ದಿಲ್ಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ದೇಶದಲ್ಲಿ ಶಾಂತಿ ಕಾಪಾಡಲು ಪ್ರಧಾನಮಂತ್ರಿ ಕ್ರಮವಹಿಸಬೇಕು, ಇದು ಸೂಕ್ತ ಎಂದು ಕುಮಾರಸ್ವಾಮಿ ಹೇಳಿದರು.







