ಬೆಂಗಳೂರು: ನಾಳೆಯಿಂದ ಐದು ದಿನಗಳ ಕಾಲ ರಾಷ್ಟ್ರೀಯ ತೋಟಗಾರಿಕೆ ಮೇಳ
ಬೆಂಗಳೂರು, ಫೆ.7: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹೆಸರುಘಟ್ಟದಲ್ಲಿ ಆಯೋಜಿಸಿರುವ ರಾಷ್ಟ್ರೀಯ ತೋಟಗಾರಿಕೆ ಮೇಳ ನಾಳೆಯಿಂದ(ಫೆ.8) ಐದು ದಿನಗಳ ಕಾಲ ನಡೆಯಲಿದ್ದು, ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್ ಅವರು ಆನ್‍ಲೈನ್ ಮೂಲಕ ಚಾಲನೆ ನೀಡಲಿದ್ದಾರೆ.
ಸೋಮವಾರ ಬೆಳಗ್ಗೆ 11ಗಂಟೆಗೆ ಮೇಳಕ್ಕೆ ಚಾಲನೆ ದೊರೆಯಲಿದ್ದು, ಪ್ರಮುಖ ಅತಿಥಿಗಳಾಗಿ ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿಶಂಕರ್ ಗುರೂಜಿ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್.ದಿನೇಶ್, ಮೇಳದ ಸಂಘಟನಾ ಕಾರ್ಯದರ್ಶಿ ಮತ್ತು ಐಐಎಚ್‍ಆರ್ ನ ಪ್ರಧಾನ ವಿಜ್ಞಾನಿ ಡಾ.ಧನಂಜಯ್ ಮತ್ತು ಸಂಸ್ಥೆಯ ವಿಜ್ಞಾನಿಗಳು ಭಾಗವಹಿಸಲಿದ್ದಾರೆ.
ಸಮಗ್ರ ತೋಟಗಾರಿಕೆ ಪದ್ಧತಿ, ಮಣ್ಣು ರಹಿತ ಕೃಷಿ ವಿಧಾನ, ಟೆರೇಸ್ ಗಾರ್ಡನಿಂಗ್, ಹೊಸ ತಂತ್ರಜ್ಞಾನಗಳ ಪರಿಚಯ, ರೈತರ ಮನೆ ಬಾಗಿಲಿಗೆ ಉತ್ಕೃಷ್ಟ ಬೀಜ ಪೂರೈಸುವ `ಸೀಡ್ ಪೋರ್ಟಲ್' ಸೇರಿದಂತೆ ಹತ್ತು ಹಲವು ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ರೈತರಿಗೆ ಸಾಕಷ್ಟು ಮಾಹಿತಿ ಮೇಳದಲ್ಲಿ ಸಿಗಲಿದೆ.
ನಗರ ಕೃಷಿಕರಿಗಾಗಿ ಹೈಡ್ರೊಪಾನಿಕ್ಸ್ ವಿಧಾನದಲ್ಲಿ ತರಕಾರಿ, ಹೂವು ಬೆಳೆಯುವ ಬಗ್ಗೆ ತರಬೇತಿ ನೀಡಲಾಗುವುದು. ಜತೆಗೆ ಅಧಿಕ ಇಳುವರಿ ಕೊಡುವ ನಾನಾ ತರಕಾರಿ, ಹೂವು ಮತ್ತು ಹಣ್ಣಿನ ಬೆಳೆಗಳ ಬಗ್ಗೆ ತಾಕುಗಳಲ್ಲಿ ಐಐಎಚ್‍ಆರ್ ನ ವಿಜ್ಞಾನಿಗಳೇ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡುವರು.
ಇಂದು ನೋಂದಾಯಿತ ಸುಮಾರು 6 ಸಾವಿರ ಮಂದಿಗೆ ಭೌತಿಕವಾಗಿ ಭಾಗವಹಿಸಲು ಅವಕಾಶ ನೀಡಲಾಗುವುದು. ಉಳಿದಂತೆ ಆನ್‍ಲೈನ್‍ನಲ್ಲಿ ರೈತರು ಹಾಗೂ ಇತರ ಆಸಕ್ತರು ಭಾಗವಹಿಸಬಹುದು. ಮೇಳಕ್ಕೆ ಬರುವವರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆಯ್ದ ಸ್ಥಳಗಳಲ್ಲಿ 10 ಮೊಬೈಲ್ ಶೌಚಾಲಯಗಳನ್ನು ತೆರೆಯಲಾಗಿದೆ.
ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಊಟದ ವ್ಯವಸ್ಥೆ ಸಂಸ್ಥೆಯಿಂದ ಉಚಿತವಾಗಿ ಇರುವುದಿಲ್ಲ. ಫುಡ್‍ಕೋರ್ಟ್‍ನಲ್ಲಿ ಹಣ ಕೊಟ್ಟು ರಿಯಾಯಿತಿ ದರದಲ್ಲಿ ಖರೀದಿಸಬೇಕು. ಮೇಳದಲ್ಲಿ ಸುಮಾರು 140 ಪ್ರದರ್ಶನ ಮಳಿಗೆಗಳಿರುತ್ತವೆ. ಬೀಜ, ಸಸಿಗಳು, ಯಂತ್ರೋಪಕರಣಗಳನ್ನು ಖರೀದಿಸಲು ಅವಕಾಶವೂ ಇರುತ್ತದೆ ಎಂದು ಆಯೋಜನಾ ಕಾರ್ಯದರ್ಶಿ ಹಾಗೂ ಪ್ರಧಾನ ವಿಜ್ಞಾನಿ ಡಾ. ಎಂ.ವಿ. ಧನಂಜಯ ತಿಳಿಸಿದರು.
ಆನ್‍ಲೈನ್ ನೋಂದಣಿ: ಕೋವಿಡ್ -19 ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಭೌತಿಕ ಹಾಗೂ ಆನ್‍ಲೈನ್ ಮೂಲಕ ಮೇಳ ನಡೆಯಲಿದೆ. ಮೇಳದಲ್ಲಿ ಪಾಲ್ಗೊಳ್ಳಲು ರೈತರಿಗೆ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಲು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತ ರೈತರು ಎನ್‍ಎಚ್‍ಎನ್ ವೆಬ್‍ಸೈಟ್ https://nhf2021.iihr.res.in ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.







