ಸ್ಕೂಟರ್ ಗೆ ಟ್ರಕ್ ಢಿಕ್ಕಿ: ವೈದ್ಯಕೀಯ ವಿದ್ಯಾರ್ಥಿನಿ ಮೃತ್ಯು

ಬೆಂಗಳೂರು, ಫೆ.7: ಸ್ಕೂಟರ್ ಗೆ ಬಿಬಿಎಂಪಿ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ವೈದ್ಯಕೀಯ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ಪುಲಕೇಶಿ ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಲಿಂಗರಾಜಪುರ ನಿವಾಸಿ ತಸ್ದೀಕ್ ಬುಶ್ರಾ (19) ಮೃತ ವೈದ್ಯಕೀಯ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ತಸ್ದೀಕ್ ಬುಶ್ರಾ ಅವರು, ಶನಿವಾರ ಸಂಜೆ ನಗರದ ಹೆಣ್ಣೂರು ಮುಖ್ಯ ರಸ್ತೆ ಮೂಲಕ ಲಿಂಗರಾಜಪುರಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ.
ಅದೇ ರಸ್ತೆಯಲ್ಲಿ ವೇಗವಾಗಿ ಬಂದ ಬಿಬಿಎಂಪಿ ಟ್ರಕ್ ಬಂದಿದ್ದು, ಬುಶ್ರಾ ಅವರ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಂತರ ಸ್ಥಳಕ್ಕಾಗಮಿಸಿದ ಪುಲಕೇಶಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.







