ಕೋವಿಡ್ -19: ಅತಿ ಹೆಚ್ಚು ಲಸಿಕೆ ನೀಡಿದ ದೇಶಗಳಲ್ಲಿ ಭಾರತಕ್ಕೆ 3ನೇ ಸ್ಥಾನ

ಹೊಸದಿಲ್ಲಿ, ಫೆ. 7: ಅತ್ಯಧಿಕ ಕೋವಿಡ್-19 ಲಸಿಕೆ ನೀಡಿದ ದೇಶಗಳಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರವಿವಾರ ತಿಳಿಸಿದೆ. ಭಾರತಕ್ಕಿಂತ ಮೊದಲ ಎರಡು ಸ್ಥಾನವನ್ನು ಅಮೆರಿಕ ಹಾಗೂ ಬ್ರಿಟನ್ ಪಡೆದುಕೊಂಡಿದೆ.
ಭಾರತದ 12 ರಾಜ್ಯಗಳಲ್ಲಿ 2 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಉತ್ತರಪ್ರದೇಶ ರಾಜ್ಯವೊಂದರಲ್ಲೇ 6,73,542 ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಫೆಬ್ರವರಿ 7 ಬೆಳಗ್ಗೆ 8 ಗಂಟೆ ವರೆಗೆ ದೇಶಾದ್ಯಂತದ ಕೋವಿಡ್-19 ಲಸಿಕೆ ಅಭಿಯಾನದ ಅಡಿಯಲ್ಲಿ ಒಟ್ಟು 57,75 ಲಕ್ಷ ಫಲಾನುಭವಿಗಳು ಲಸಿಕೆ ಸ್ವೀಕರಿಸಿದ್ದಾರೆ. ಒಟ್ಟು ಲಸಿಕೆ ಪಡೆದುಕೊಂಡವರಲ್ಲಿ 53,04,546 ಆರೋಗ್ಯ ಕಾರ್ಯಕರ್ತರು ಹಾಗೂ 4,70,776 ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 8,875 ಬೈಠಕ್‌ನಲ್ಲಿ 3,58,473 ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದುವರೆಗೆ ಒಟ್ಟು 1,15,178 ಬೈಠಕ್ ನಡೆಸಲಾಗಿದೆ. ಪ್ರತಿದಿನ ಲಸಿಕೆ ತೆಗೆದುಕೊಳ್ಳುವ ಫಲಾನುಭವಿಗಳ ಸಂಖ್ಯೆ ಸ್ಥಿರವಾಗಿ ಏರಿಕೆಯಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.





